ಸಾರಾಂಶ
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ-ಮುಸ್ಲಿಂರು ಪ್ರೀತಿ, ವಿಶ್ವಾಸದ ಮೂಲಕ ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ಅಂದಾಗ ಮಾತ್ರ ಹಬ್ಬಕ್ಕೆ ಅರ್ಥ ಬರುತ್ತದೆ.
ರಾಣಿಬೆನ್ನೂರು:
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಕಾನೂನು ಪಾಲನೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಉಳಿಸುವಂತೆ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಹೇಳಿದರು.ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಅನುಮತಿ ಪಡೆಯದೆ ಪ್ರತಿಷ್ಠಾಪನೆ ಮಾಡಿದ್ದರೆ ಪ್ರತಿಷ್ಠಾಪನೆ ಮಾಡಿದ ಮಂಡಳಿ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು. ಜಿಲ್ಲಾಡಳಿತ ನೀಡಿದ 30 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸ್ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡುತ್ತದೆ. ಆದರೆ ಮಂಡಳಿ ಮುಖಂಡರು ನಮಗೆ ಸಲಹೆ ನೀಡಬೇಕು. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಸಾಮರಸ್ಯ ಹಬ್ಬವಾಗಿ ಮಾಡಬೇಕೆಂದರು.ಹಿಂದೂ-ಮುಸ್ಲಿಂರು ಪ್ರೀತಿ, ವಿಶ್ವಾಸದ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ಅಂದಾಗ ಮಾತ್ರ ಹಬ್ಬಕ್ಕೆ ಅರ್ಥ ಬರುತ್ತದೆ. ಇದರೊಂದಿಗೆ ಕಾನೂನುಗಳನ್ನು ಗೌರವಿಸಬೇಕೆಂದು ತಿಳಿಸಿದರು.ಈ ವೇಳೆ ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಸಿಪಿಐಗಳಾದ ಬಸವರಾಜ, ಸಿದ್ದೇಶ ಎಂ.ಡಿ., ತಹಸೀಲ್ದಾರ್ ಆರ್.ಎಚ್. ಭಾಗವಾನ್, ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ಹೆಸ್ಕಾಂ ಅಧಿಕಾರಿಗಳಾದ ಪ್ರಸಾದ ಬಾಬು, ಲಕ್ಷ್ಮಣ ಹಾಗೂ ನಗರಸಭೆ ಸದಸ್ಯರು, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.