ಸಾರಾಂಶ
ಕಾರವಾರ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೇವಲ ಮಣ್ಣಿನಿಂದ ತಯಾರಿಸಿದ ಮೂರ್ತಿ ಮಾತ್ರ ಬಳಸಲು ಅವಕಾಶ ಇದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಪ್ರಯುಕ್ತ ಗೌರಿ ಹಾಗೂ ಗಣೇಶನ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲ ಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯ. ಈ ಪ್ರತಿಮೆಗಳ ವಿಸರ್ಜನೆಯಿಂದ ನೈಸರ್ಗಿಕ ಜಲಮೂಲಗಳಲ್ಲಿ ಜಲಮಾಲಿನ್ಯ ಉಂಟಾಗಲಿದೆ. ಉಚ್ಚ ನ್ಯಾಯಾಲಯದ ಆದೇಶ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಂತೆ ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ಕೇವಲ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಮಾತ್ರ ಉಪಯೋಗಿಸಲು ಅವಕಾಶ ಇದೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಸ್ಥಳೀಯ ಸಂಸ್ಥೆಗಳಿಂದ ಗುರುತಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.
ಮೂರ್ತಿ ವಿಸರ್ಜನೆಗಾಗಿ ಪ್ರತಿ ಸ್ಥಳೀಯ ಸಂಸ್ಥೆಯಿಂದ ಕನಿಷ್ಠ 4ರಿಂದ 5 ಕಡೆ ಮತ್ತು ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯನ್ನು ಸಂಪರ್ಕಿಸಬಹುದು. ನಿಗದಿತ ಸ್ಥಳಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‌ಗಳಲ್ಲಿ, ಕಲ್ಯಾಣಿಗಳಲ್ಲಿ ಕೇವಲ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು.ಪಕ್ಕದಲ್ಲಿಯೇ ಸ್ಥಳೀಯ ಸಂಸ್ಥೆಗಳಿಂದ ನಿಗದಿಪಡಿಸಿದ ಕಂಟೇನರ್‌ಗಳಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಹಸಿ ಕಸಗಳನ್ನು ಪ್ರತ್ಯೇಕಿಸಿ ಹಾಕಬೇಕು. ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ನಮ್ಮ ಜಿಲ್ಲೆಯಲ್ಲಿ 1434 ಸ್ಥಳಗಳಲ್ಲಿ ಸಾರ್ವಜನಿಕ ವಿಗ್ರಹಗಳನ್ನು ಇಡಲಾಗುತ್ತಿದೆ. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿ ಪಡೆದ ನಂತರವೇ ಸ್ಥಾಪಿಸಬೇಕು. ಸಮಿತಿಯವರು ತಮ್ಮ ಪೂಜೆ ಮತ್ತು ಅಲಂಕಾರದ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು, ಫ್ಲೆಕ್ಸ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಅದೇಶದಂತೆ ಶಿಫಾರಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಇಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಎಲ್ಲ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.