ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತ್ಯಾತೀತ ಸಮಾಜ ನಿರ್ಮಾಣ, ದೀನ ದಲಿತರ ಉದ್ಧಾರ, ಮಹಿಳೆಯರ ಏಳ್ಗೆಗಾಗಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಮುಂಡರಗಿ: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತ್ಯಾತೀತ ಸಮಾಜ ನಿರ್ಮಾಣ, ದೀನ ದಲಿತರ ಉದ್ಧಾರ, ಮಹಿಳೆಯರ ಏಳ್ಗೆಗಾಗಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಈ ಇಬ್ಬರು ಮಹನೀಯರ ಜಯಂತಿಯನ್ನು ತಾಲೂಕಿನ ಎಲ್ಲ ಇಲಾಖೆಯಲ್ಲಿ ನಿಯಮಾನುಸಾರವಾಗಿ ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಗುರುವಾರ ಸಂಜೆ ಜರುಗಿದ ಏ. 5ರಂದು ಜರುಗಲಿರುವ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಏ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ನಿಯಮಾನುಸಾರ ಆಯಾ ದಿನ ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ. ಆದರೆ, ನೀವು ಸಾರ್ವಜನಿಕವಾಗಿ ಮಾಡುವುದಾದರೆ ನೀವು ನಿಗದಿಗೊಳಿಸಿದ ದಿನಾಂಕದಂದು ಎರಡೂ ಜಯಂತಿಗಳ ಯಶಸ್ವಿಗಾಗಿ ಸರ್ಕಾರದ ಮಟ್ಟದಲ್ಲಿ ಸಹಾಯ, ಸಹಕಾರ ನೀಡಲಾಗುತ್ತದೆ. ತಾಲೂಕಿನ ಎಲ್ಲ ಮುಖಂಡರು ಒಗ್ಗಟ್ಟಾಗಿ ಯಾವುದೇ ಭೇದ-ಭಾವವಿಲ್ಲದೇ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ದಲಿತ ಮುಖಂಡ ಎಚ್.ಡಿ. ಪೂಜಾರ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಬಹಳ ವಿಶೇಷವಾಗಿರುವುದರಿಂದ ಏ. 14ರಂದು ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕಿನ ಜನಪ್ರತಿನಿಧಿಗಳು, ಗಣ್ಯರು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಬಳಗದ ವತಿಯಿಂದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಮುಖಂಡ ಆನಂದಗೌಡ ಪಾಟೀಲ ಮಾತನಾಡಿ, ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಯಶಸ್ವಿಗಾಗಿ ಎಲ್ಲ ಸಮಾಜದವರು ಕೈ ಜೋಡಿಸಬೇಕು. ಈ ಮೂಲಕ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಸಲಹೆ ನೀಡಿದರು.

ದಲಿತ ಮುಖಂಡ ಸೋಮಣ್ಣ ಹೈತಾಪೂರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವ ಸಮಾಜದ ಒಳಿತಿಗಾಗಿ ಅನೇಕ ಅನುಕೂಲತೆಗಳನ್ನು ಕಲ್ಪಿಸಿದ್ದಾರೆ. ಹೀಗಾಗಿ, ಅವರ ಜಯಂತಿಯಂದೇ ಸರ್ವ ಸಮಾಜದವರೂ ಸೇರಿ ಪುರಸಭೆ ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ನಂತರ ಎಲ್ಲರೂ ಒಗ್ಗಟ್ಟಾಗಿ ಜಯಂತಿ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದರು.

ರುದ್ರಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ನಾಗರಾಜ ಹೊಂಬಳಗಟ್ಟಿ, ಜ್ಯೋತಿ ಹಾನಗಲ್, ಬಸವರಾಜ ದೇಸಾಯಿ, ಲಕ್ಷ್ಮಣ್ಣ ತಗಡಿಮನಿ, ಬಸವಂತಪ್ಪ ಹೊಸಮನಿ, ಬಾಬಣ್ಣ ಗಟ್ಟಿ, ಚಂದ್ರು ಪೂಜಾರ, ರಾಘವೇಂದ್ರ ನೆರೇಗಲ್, ಬಸವರಾಜ ನವಲಗುಂದ ಮಾತನಾಡಿದರು.

ಸಭೆಯಲ್ಲಿ ತಾಪಂ ಇಒ ವಿಶ್ವನಾಥ ಹೊಸಮನಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ರಾಮಣ್ಣ ಕೋಳಿ, ನಿಂಗರಾಜ ಹಾಲಿನವರ, ದ್ಯಾಮಣ್ಣ ವಾಲಿಕಾರ, ಮೈಲಾರಪ್ಪ ಕಲಕೇರಿ, ಮರಿಯಪ್ಪ ಸಿದ್ದಣ್ಣವರ, ಗಣೇಶ ಭರಮಕ್ಕನವರ, ಶ್ರೀನಿವಾಸ್ ಕೊರ್ಲಗಟ್ಟಿ, ಧ್ರುವ ಹೂಗಾರ, ಪ್ರಭಾವತಿ ಬೆಳವಣಕಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.