ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಿ: ಡಾ.ದೊಡ್ಡೆ

| Published : May 28 2024, 01:05 AM IST

ಸಾರಾಂಶ

ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಾಲಾ ಆವರಣ, ಶೌಚಾಲಯ, ಅಡುಗೆ ಮನೆ, ಶಾಲಾ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ

ಕನ್ನಡಪ್ರಭ ವಾರ್ತೆ ಔರಾದ್

ಮೇ 29ರಂದು ಶಾಲೆಗಳು ಆರಂಭವಾಗುತ್ತಿದ್ದು, ಮೇ 31ರಂದು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸುವುದರ ಜತೆಗೆ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಿ, ಸ್ವಚ್ಛತೆ ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ಕೊಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಟಿ.ಆರ್ ದೊಡ್ಡೆ ಕಿವಿಮಾತು ಹೇಳಿದರು.

2024-25ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳ ಆರಂಭದ ಹಿನ್ನೆಲೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಇಲ್ಲಿ ನಡೆದ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿ, ಮೊದಲ ದಿನ ಮಕ್ಕಳಿಗೆ ಸಿಹಿ ಊಟ ಮಾಡಿ ಬಡಿಸಿ. ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಾಲಾ ಆವರಣ, ಶೌಚಾಲಯ, ಅಡುಗೆ ಮನೆ, ಶಾಲಾ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಶಾಲಾ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರ ಸಹಕಾರ ಪಡೆದು ಸ್ವಚ್ಛತಾ ಕಾರ್ಯ ನಡೆಸಿ ಎಂದು ಸೂಚಿಸಿದರು.

ತರಗತಿಗಳು ಸಮರ್ಪಕವಾಗಿ ನಡೆಯಲು ಶಾಲಾ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಅಗತ್ಯ ದಾಖಲೆ ನಿರ್ವಹಣೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಮುಖ್ಯ ಶಿಕ್ಷಕರ ಜವಾಬ್ದಾರಿ. ಶಾಲೆ ಆಕರ್ಷಣೀಯಗೊಳಿಸಿ, ಗ್ರಂಥಾಲಯ, ಗಣಕಯಂತ್ರ, ಪ್ರಯೋಗಾಲಯ ಎಲ್ಲವೂ ಸುಸಜ್ಜಿತವಾಗಿರಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 19 ಹೊಸ ಆಂಗ್ಲ ಮಾಧ್ಯಮ ಶಾಲೆಗಳು ಆರಂಭಿಸಲು ಇಲಾಖೆ ಆದೇಶಿಸಿದೆ. ಈ ಹಿನ್ನೆಲೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ದಾಖಲಾತಿ ಹೆಚ್ಚಿಸುವಂತೆ ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು. ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆಯಾಗಲಿ ಎಂದರು.

ಈ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಇನಾಯತ ಅಲಿ ಸೌದಾಗರ್, ಬಿಆರ್‌ಸಿ ಪ್ರಕಾಶ ರಾಠೋಡ, ದೈಹಿಕ ಶಿಕ್ಷಣಾಧಿಕಾರಿ ಜೈರಾಜ್, ಇಸಿಒ ಈಶ್ವರ ಕ್ಯಾದೆ, ಶಿಕ್ಷಕ ಸಂಘದ ಅಧ್ಯಕ್ಷ ಸಂಜೀವಕುಮಾರ್ ಮೇತ್ರೆ, ನಾರಾಯಣ ರಾಠೋಡ್, ಕೃಷ್ಣರೆಡ್ಡಿ, ಶಾಲಿವಾನ ಉದಗಿರೆ ಸೇರಿದಂತೆ ಇನ್ನಿತರರಿದ್ದರು.