ಮೈಸೂರು ದಸರಾ ರೀತಿ ತುಮಕೂರು ದಸರಾ ಆಚರಿಸಿ

| Published : Sep 22 2024, 01:45 AM IST

ಸಾರಾಂಶ

ತುಮಕೂರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಅಕ್ಟೋಬರ್ 11 ಮತ್ತು 12 ರಂದು ಆಚರಿಸಲು ಉದ್ದೇಶಿಸಿರುವ ತುಮಕೂರು ದಸರಾ ಉತ್ಸವವನ್ನು ಮಿನಿ ಮೈಸೂರು ದಸರಾ ಉತ್ಸವವನ್ನಾಗಿ ಆಚರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಬೇಕೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಅಕ್ಟೋಬರ್ 11 ಮತ್ತು 12 ರಂದು ಆಚರಿಸಲು ಉದ್ದೇಶಿಸಿರುವ ತುಮಕೂರು ದಸರಾ ಉತ್ಸವವನ್ನು ಮಿನಿ ಮೈಸೂರು ದಸರಾ ಉತ್ಸವವನ್ನಾಗಿ ಆಚರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಬೇಕೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ತುಮಕೂರು ದಸರಾ ಪ್ರಧಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ ಉತ್ಸವವನ್ನು ಧಾರ್ಮಿಕ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ, ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಉತ್ಸವವನ್ನು ವ್ಯವಸ್ಥಿತವಾಗಿ ರೂಪಿಸಲು ರಚಿಸಿರುವ ಸ್ವಾಗತ, ಆಹಾರ, ಸಾಂಸ್ಕೃತಿಕ, ಮೆರವಣಿಗೆ, ರೈತ ದಸರಾ ಮತ್ತು ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ದೀಪಾಲಂಕಾರ, ಕ್ರೀಡೆ, ವೇದಿಕೆ ನಿರ್ಮಾಣ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಗೂ ಸ್ಥಳೀಯ ಜನಪ್ರತಿನಿಧಿ, ದೇವಸ್ಥಾನದ ಅರ್ಚಕರು, ನಾಗರಿಕರು, ಪತ್ರಕರ್ತರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳ ರೂಪು-ರೇಷೆಗಳನ್ನು ತಯಾರಿಸಬೇಕೆಂದು ನಿರ್ದೇಶಿಸಿದರು. ಯಾವುದೇ ಜಾತಿ, ಮತ, ಧರ್ಮ, ವೈಯಕ್ತಿಕ ಪ್ರತಿಷ್ಠೆಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಂಡು ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, 2 ದಿನಗಳ ಕಾಲ ನಡೆಯುವ ದಸರಾ ಉತ್ಸವದಲ್ಲಿ ರಾಜ್ಯದ ಪ್ರಸಿದ್ಧ ಗಾಯಕರಿಂದ ಗೀತಗಾಯನ, ಮಕ್ಕಳಿಂದ ಶಾಸ್ತ್ರೀಯ ಸಂಗೀತ ಕಚೇರಿ, ಸ್ಥಳೀಯ ಕಲೆಗಳ ಪ್ರದರ್ಶನ, ಮ್ಯಾರಥಾನ್ ಸ್ಪರ್ಧೆ, ಕ್ರೀಡಾ ಸ್ಪರ್ಧೆ ಆಯೋಜಿಸಲು ಅಧಿಕಾರಿಗಳ ತಂಡ ಅಣಿಯಾಗಿದೆ. ಉತ್ಸವದ ೨ನೇ ದಿನ ಅಂತಿಮವಾಗಿ ಜನಾಕರ್ಷಕವಾದ ದ್ರೋಣ್ ಪ್ರದರ್ಶನ ಹಾಗೂ ಬಾಣ-ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎಚ್.ಎ.ಎಲ್, ಇಸ್ರೋ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅತ್ಯಾಧುನಿಕ ಹಾಗೂ ಆಕರ್ಷಕವಾದ ವಸ್ತುಪ್ರದರ್ಶನಗಳನ್ನು ಏರ್ಪಡಿಸಬೇಕು. ಭವಿಷ್ಯದ ಭಾರತ, ವಿವಿಧತೆಯಲ್ಲಿ ಏಕತೆಯ ಭಾರತ, ನಾಡು ನುಡಿ ಸಂಸ್ಕೃತಿ ಒಳಗೊಳ್ಳುವ ವಿಷಯ ಕುರಿತ ಕವಿಗೋಷ್ಠಿಯನ್ನು ಏರ್ಪಡಿಸಬೇಕು ಎಂದು ತಿಳಿಸಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಮಾತನಾಡಿ, ಮೆರವಣಿಗೆಯಲ್ಲಿ 3 ಆನೆಗಳು, ಹಳ್ಳಿಕಾರ್ ಎತ್ತು, ಕುದುರೆ, ವಿಂಟೇಜ್ ಕಾರು, ಜಿಲ್ಲೆಯ 70ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಸೇರಿದಂತೆ 15 ಕಲಾ ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.ತುಮಕೂರು ದಸರಾ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ನಮ್ಮ ಪರಂಪರೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಇಂತಹ ಹಬ್ಬಗಳ ಸಾಮೂಹಿಕ ಆಚರಣೆ ಅಗತ್ಯವಿದೆ. ಮೊದಲ ಬಾರಿಗೆ ದಸರಾ ಆಚರಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಪ್ರಮುಖ ಬೀದಿ ಮತ್ತು ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದು ಸೂಚನೆ ನೀಡಿದರು. ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಎಸ್ಪಿ ಕೆ.ವಿ. ಅಶೋಕ್, ಜಿಪಂ ಸಿಇಒಜಿ. ಪ್ರಭು, ಎಡೀಸಿ ಡಾ: ಎನ್. ತಿಪ್ಪೇಸ್ವಾಮಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಸವಿತಾ, ಈಶ್ವರ್ ಕು ಮಿರ್ಜಿ ಉಪಸ್ಥಿತರಿದ್ದರು.

ರಂಗೋಲಿ, ಗೊಂಬೆ ಪ್ರದರ್ಶನ ಏರ್ಪಡಿಸಿಮಕ್ಕಳ ದಸರಾ ಅಂಗವಾಗಿ ಏರ್ಪಡಿಸಲಾಗುವ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಾಗವಹಿಸಬೇಕು. ಮಹಿಳಾ ದಸರಾ ಕಾರ್ಯಕ್ರಮದಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ರಂಗೋಲಿ, ದಸರಾ ಗೊಂಬೆ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಹಾಗೂ ಉಪನಿರ್ದೇಶಕ ಚೇತನ್ ಕುಮಾರ್‌ಗೆ ಸಚಿವ ಪರಮೇಶ್ವರ್ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಯೋಜಿಸುತ್ತಿರುವ ತುಮಕೂರು ದಸರಾ ಕಾರ್ಯಕ್ರಮ ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತಾಗಬೇಕು.

ವಿ. ಸೋಮಣ್ಣ ಕೇಂದ್ರ ಸಚಿವ