ಯುಗಾದಿ, ರಂಜಾನ್ ಶಾಂತಿ, ಸೌಹಾರ್ದದಿಂದ ಆಚರಿಸಿ

| Published : Mar 27 2025, 01:07 AM IST

ಸಾರಾಂಶ

ಯುಗಾದಿ, ರಂಜಾನ್ ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸಬೇಕು. ಆ ಮೂಲಕ ಎಲ್ಲರೂ ಸಾಮರಸ್ಯ ಮೆರೆಯಬೇಕು. ಯಾರಾದರೂ ಶಾಂತಿ- ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ತಪ್ಪಿದ್ದಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದ್ದಾರೆ.

- ನಮ್ಮ ಧರ್ಮ, ಸಮುದಾಯ ಅಂತಾ ಅಧಿಕಾರಿಗಳು ಮೈಮರೆಯದಿರಿ: ಗಂಗಾಧರ ಸ್ವಾಮಿ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಯುಗಾದಿ, ರಂಜಾನ್ ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸಬೇಕು. ಆ ಮೂಲಕ ಎಲ್ಲರೂ ಸಾಮರಸ್ಯ ಮೆರೆಯಬೇಕು. ಯಾರಾದರೂ ಶಾಂತಿ- ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ತಪ್ಪಿದ್ದಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದರು.

ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಯುಗಾದಿ ಮತ್ತು ರಂಜಾನ್ ಹಬ್ಬಗಳ ಅಂಗವಾಗಿ ಹಮ್ಮಿಕೊಂಡಿದ್ದ ನಾಗರೀಕ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಧರ್ಮ, ನಮ್ಮ ಸಮುದಾಯದವರೆಂಬ ಕಾರಣಕ್ಕೆ ಅಧಿಕಾರಿಗಳು, ಸಿಬ್ಬಂದಿ ಸಹ ಯಾರನ್ನೂ ರಕ್ಷಿಸಬಾರದು. ಯಾರೇ ತಪ್ಪು ಮಾಡಿದ್ದರೂ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಿ, ಕ್ರಮ ಕೈಗೊಳ್ಳಬೇಕು ಎಂದರು.

ಕೆಲ ಕಿಡಿಗೇಡಿಗಳು ವೈಯಕ್ತಿಕ ಕಲಹ, ಸಣ್ಣ ಘಟನೆಗಳನ್ನೂ ದೊಡ್ಡದಾಗಿ ಬಿಂಬಿಸಿ, ಸಾಮರಸ್ಯ ಕದಡುವ ಕೆಲಸ ಮಾಡುತ್ತಾರೆ. ಅಂತಹವರ ಬಗ್ಗೆ ಆಯಾ ಸಮುದಾಯದವರೇ ಮಾಹಿತಿ ನೀಡಿದರೆ, ಹಬ್ಬಗಳನ್ನು ಮತ್ತಷ್ಟು ಶಾಂತಿಯುತವಾಗಿ ಆಚರಿಸಲು ಸಹಕಾರಿಯಾಗುತ್ತದೆ. ಎಲ್ಲ ಸಮುದಾಯದವರೂ ಒಂದೇ ತಾಯಿ ಮಕ್ಕಳಂತೆ ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಯುಗಾದಿ ಹಬ್ಬ ಮಾ.30ರಂದು ಹಾಗೂ ರಂಜಾನ್ ಹಬ್ಬ ಮಾ.31ರಂದು ನಡೆಯಲಿದೆ. ಎರಡೂ ಹಬ್ಬಗಳು ಬಹಳ ವಿಶೇಷವಾಗಿದ್ದು, ಯುಗಾದಿ ಮರುದಿನ ರಂಜಾನ್ ಹಬ್ಬ ಬರುವುದರಿಂದ ಯುಗಾದಿ ಹೊಸ ವರ್ಷ ಹಬ್ಬ ಆಚರಿಸಿ, ಚಂದ್ರನ ದರ್ಶನ ಮಾಡಲಾಗುತ್ತದೆ. ರಂಜಾನ್ ಹಬ್ಬವನ್ನು ಚಂದ್ರದರ್ಶನದ ನಂತರ ಆಚರಿಸಲಾಗುತ್ತದೆ. ಹಾಗಾಗಿ, ಎರಡೂ ಹಬ್ಬಗಳು ಬಹಳ ಪವಿತ್ರ ಹಬ್ಬಗಳಾಗಿವೆ. ಉಭಯ ಧರ್ಮೀಯರು ಶಾಂತಿ, ಸಾಮರಸ್ಯದಿಂದ ನಿಮ್ಮ ನಿಮ್ಮ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು.

ಹಬ್ಬಗಳ ಹಿನ್ನೆಲೆ ಜನರಿಗೆ ಅರಿವು ಮೂಡಿಸಲು ಜಿಲ್ಲಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸೌಹಾರ್ದ ಸಭೆ ನಡೆಸಿ, ತಿಳಿವಳಿಕೆ ಮೂಡಿಸಲಾಗುತ್ತಿದೆ. ಯಾವುದೇ ಸಮುದಾಯದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವಂತಿಲ್ಲ, ಶೇರ್ ಮಾಡಿಕೊಳ್ಳುವಂತಿಲ್ಲ. ಸೋಷಿಯಲ್ ಮೀಡಿಯಾ ಬಳಸುವಾಗ ಎಚ್ಚರವಿರಲಿ. ಹಬ್ಬದ ವೇಳೆ ಯುವಕರು ಸಂಚಾರ ನಿಯಮ ಉಲ್ಲಂಘಿಸದೇ, ನಿಯಮಾನುಸಾರ ವಾಹನ ಚಲಾಯಿಸಬೇಕು ಎಂದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಒಟ್ಟಾರೆ ಹಬ್ಬಗಳು ಶಾಂತಿ, ಸುವ್ಯವಸ್ಥಿತವಾಗಿ, ಸಾಮರಸ್ಯದಿಂದ ಆಚರಿಸಬೇಕೆಂಬುದೇ ಸಭೆಯ ಉದ್ದೇಶ ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದರು.

ಮುಸ್ಲಿಂ ಸಮಾಜದ ಮುಖಂಡರೊಬ್ಬರು ಮಾತನಾಡಿ, ದಾವಣಗೆರೆ ನಗರದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನಾವು ಸಹ ಸದಾ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆಗೆ ಕೈ ಜೋಡಿಸುತ್ತೇವೆ ಎಂದು ವಾಗ್ದಾನ ಮಾಡಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯ, ಸಂಘಟನೆಗಳ ಮುಖಂಡರು ಸಭೆಯಲ್ಲಿದ್ದರು.

- - - -26ಕೆಡಿವಿಜಿ6.ಜೆಪಿಜಿ:

ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಯುಗಾದಿ- ರಂಜಾನ್ ಹಬ್ಬಗಳ ಹಿನ್ನೆಲೆ ನಾಗರೀಕ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿದರು.