ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲಾಧಿಕಾರಿಗಳ ಅನುಮತಿ ನಿರಾಕರಣೆ ನಡುವೆ ವಿವಿಧ ದಲಿತ ಪರ ಸಂಘಟನೆಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಮಹಿಷ ದಸರಾ ಆಚರಿಸಿದರು.ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ದಲಿತ ಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅವರು ಅನುಮತಿ ನೀಡಿರಲಿಲ್ಲ. ಆದರೂ ಕೂಡ ಜಯಂತಿಯನ್ನು ಆಚರಿಸಲಾಯಿತು. ಸುಮಾರು 25ಕ್ಕೂ ಹೆಚ್ಚು ದಲಿತ ಮುಖಂಡರು ಮಹಿಷಾಸುರರ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ಜೈಕಾರ ಹಾಕಿದರು. ಮಹಿಷ ರಾಜನಿಂದಲೇ ಮೈಸೂರಿಗೆ ಮೈಸೂರು ಅಂತ ಹೆಸರು ಬಂದಿದ್ದು. ಅವರು ಬೌದ್ಧ ಧರ್ಮದ ಪ್ರಚಾರಕರಾಗಿದ್ದರು. ಆದರೆ, ಆದಿವಾಸಿಮಹಾರಾಜರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಖಂಡನಿಯ ಎಂದು ಮುಖಂಡರು ಹೇಳಿದರು.
ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಖಾದಿ, ಕಾವಿ ಹಾಗೂ ಕಿಡಿಗೇಡಿಗಳಿಂದ ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಆಚರಣೆಯನ್ನು ಪ್ರತಿ ವರ್ಷವೂ ಮಾಡೇ ತೀರುತ್ತೇವೆ ತಡೆಯಲು ಯಾರಿಂದ ಸಾಧ್ಯವಿಲ್ಲ ಎಂದು ಹೇಳಿದರು.ಭೀಮ್ ಆರ್ಮಿ ಸಂಘಟನೆ ಮುಖಂಡ ಹೊನ್ನೇಶ್ ಮಾತನಾಡಿ, ಮಹಿಷಾಸುರ ಜಯಂತಿಗೆ ಹಲವು ವರ್ಷಗಳ ಇತಿಹಾಸ ಇದೆ. ಈ ಜಯಂತಿಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನುಮತಿ ನಿರಾಕರಣೆ ಪತ್ರವನ್ನು ದಲಿತ ಮುಖಂಡರು ಬೆಂಕಿ ಹಚ್ಚಿ ಸುಡುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ಮರ್ಲೆ ಅಣ್ಣಯ್ಯ ಹಾಗೂ ಕಾರ್ಯಕರ್ತರು ಇದ್ದರು.ಮುನ್ನೆಚರಿಕೆ ಕ್ರಮವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಆಜಾದ್ ಪಾರ್ಕ್ ವೃತ್ತದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 30 ಕೆಸಿಕೆಎಂ 5ಚಿಕ್ಕಮಗಳೂರಿನಲ್ಲಿ ಮಹಿಷಾಸುರ ಜಯಂತಿ ಆಚರಣೆಗೆ ಅನುಮತಿ ನಿರಾಕರಣೆ ಮಾಡಿ ಜಿಲ್ಲಾಧಿಕಾರಿ ನೀಡಿರುವ ನೋಟೀಸನ್ನು ಆಜಾದ್ ಪಾರ್ಕ್ ವೃತ್ತದಲ್ಲಿ ದಲಿತ ಸಂಘಟನೆಗಳ ಮುಖಂಡರು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.