ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಜನ್ಮ ದಿನವನ್ನು ಜಿಲ್ಲಾಡಳಿತದ ವತಿಯಿಂದ ಆ.೨೦ರಂದು ಆಚರಿಸಲು ನಿರ್ಧರಿಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿ.ದೇವರಾಜ್ ಅರಸು ಅವರ ೧೦೯ನೇ ಜನ್ಮ ದಿನ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಡಿ.ದೇವರಾಜ್ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ ೯.೩೦ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಕಂದಗಲ್ ಹನುಮಂತರಾಯ ರಂಗ ಮಂದಿರಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಜಯಂತಿ ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗದ ಇಲಾಖೆಯ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿರುವ ನಿಲಯಾರ್ಥಿಗಳಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.ಡಿ.ದೇವರಾಜ್ ಅರಸು ಅವರ ಕುರಿತಾಗಿ ಸುಂದರ ರೂಪಕ ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲ ಅಗತ್ಯ ಸಿದ್ಧತೆ ಇಲಾಖೆಯ ಅಧಿಕಾರಿಗಳು ಮಾಡಿಕೊಳ್ಳಬೇಕು. ವೇದಿಕೆ ಅಲಂಕಾರ, ನೀರಿನ ವ್ಯವಸ್ಥೆ, ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿ, ನಿಗದಿತ ಅವಧಿಯಲ್ಲಿ ವಿತರಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಅರವಿಂದ ಹಿರೊಳ್ಳಿ, ವಿದ್ಯಾವತಿ ಅಂಕಲಗಿ, ಮಲ್ಲು ಬಿದರಿ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ದೇವೇಂದ್ರ ಮೇರೆಕರ್, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಸಿದ್ದು ರಾಯಣ್ಣನವರ ಸೇರಿ ಇತರರು ಇದ್ದರು.