ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇನ್ನು ಮುಂದೆ ತಮ್ಮ ವಿರುದ್ಧ ನಾಲಿಗೆ ಹರಿಬಿಟ್ಟರೆ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ಅವರು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ವೀರಣ್ಣ ಚರಂತಿಮಠ ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಬಿಟಿಡಿಎ ಬಿವಿವಿ ಸಂಘಕ್ಕೆ ನೀಡಿರುವ ಜಾಗವನ್ನು ಜಲಸಂಪನ್ಮೂಲ ಇಲಾಖೆ ವಾಪಸ್ ಪಡೆಯಲು ಆದೇಶಿಸಿರುವ ಹಿಂದೆ ತಮ್ಮ ಕೈವಾಡವಿದೆ ಎಂದು ಚರಂತಿಮಠ ಅವರು ಆರೋಪಿಸಿದ್ದು ಹಸಿ ಸುಳ್ಳು. ಬಹುಪಾಲು ಶಿಕ್ಷಣ ಬಿವಿವಿ ಸಂಘದಲ್ಲೇ ಆಗಿದೆ. ಸಂಘಕ್ಕೆ ಮಾತೃಸ್ಥಾನ ನೀಡಿದ ವ್ಯಕ್ತಿ ನಾನು. ಚರಂತಿಮಠ ಸಂಘಕ್ಕೆ ಮೊದಲ ಅಧ್ಯಕ್ಷರೆನಲ್ಲ. ಬಹಳಷ್ಟು ಜನ ಮಹನೀಯರು, ಸ್ವಾಮೀಜಿಗಳು ಕಷ್ಟಪಟ್ಟು ಸಂಘ ಕಟ್ಟಿದ್ದಾರೆ. ಹೆತ್ತ ತಾಯಿಗೆ ದ್ರೋಹ ಮಾಡುವ ಭಾವನೆ ನನ್ನಲ್ಲಿಲ್ಲ. ಹೆತ್ತ ತಾಯಿಗೆ ದ್ರೋಹ ಮಾಡಿದವರು ಯಾರು ಎನ್ನುವುದು ಬಾಗಲಕೋಟೆ ಜನತೆಗೆ ಗೊತ್ತಿದೆ ಎಂದು ಹರಿಹಾಯ್ದರು.
ವೈಯಕ್ತಿಕ ಹಿತಾಸಕ್ತಿ:ವೈಯಕ್ತಿಕ ಹಿತಾಸಕ್ತಿ, ರಾಜಕೀಯ ತೆವಲಿಗಾಗಿ ನನ್ನ ಹೆಸರನ್ನು ಎಳೆದು ತಂದು, ನನ್ನ ಬಗೆಗೆ ತಪ್ಪು ಕಲ್ಪನೆ ಮೂಡಿಸುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಚರಂತಿಮಠ ಮಾಡುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿಗೆ ಸಂಘವನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮೇಲಿಂದ ಮೇಲೆ ನಡೆಯುತ್ತಿದೆ ಎಂದರು.
ಬಿಟಿಡಿಎ ಬಿವಿವಿ ಸಂಘಕ್ಕೆ ನೀಡಿದ್ದ ಭೂಮಿ ವಾಪಸಾತಿ ಹಿನ್ನೆಲೆಯಲ್ಲಿ ತಾವು ಸಚಿವರೊಬ್ಬರೊಂದಿಗೆ ಚರ್ಚೆ ಮಾಡಿದ್ದಾಗಿ ಹೇಳಿದ್ದಾರೆ. ಅವರು ನಿಜವಾಗಿಯೂ ಸತ್ಯ ಸಂಧರಾಗಿದ್ದಲ್ಲಿ ಯಾವ ಸಚಿವರೊಂದಿಗೆ ಮಾತನಾಡಿರುವೆ ಎನ್ನುವುದನ್ನು ಬಹಿರಂಗಗೊಳಿಸಲಿ. ಸುಳ್ಳುಗಳನ್ನು ಹೆಣೆಯುವುದರಲ್ಲಿ ಚರಂತಿಮಠ ಮಹಾ ನಿಸ್ಸೀಮ. ಬಿಟಿಡಿಎ ಸದಸ್ಯತ್ವ ತಮಗೆ ಕಾನೂನು ಬದ್ಧವಾಗಿ ಲಭ್ಯವಾಗಿರುವ ಸ್ಥಾನ. ಈ ವಿಷಯದಲ್ಲಿ ಚರಂತಿಮಠ ಅವರಿಗೆ ಕಾನೂನು ಮಾಹಿತಿ ಇಲ್ಲ. ನಾನು ಬಿಟಿಡಿಎ ಸದಸ್ಯನಾದರೆ ಇವರಿಗೇನು ಬ್ಯಾನಿ ಎಂದು ಪ್ರಶ್ನಿಸಿದರು.ಚರಂತಿಮಠ ದಬ್ಬಾಳಿಕೆ ಪ್ರವೃತ್ತಿ ಬಿಡಲಿ:
ಅನಗತ್ಯ ಸುಳ್ಳುಗಳನ್ನು ಸೃಷ್ಟಿಸಿ ಹೇಳುವ ಕೆಲಸವನ್ನು ಚರಂತಿಮಠ ಅವರು ಇನ್ನಾದರೂ ಬಿಡಲಿ. ಒಂದೊಮ್ಮೆ ತಮ್ಮ ಚಾಳಿ ಮುಂದುವರಿಸಿದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಹಿಂಜರಿಯಲಾರೆ ಎಂದು ಎಚ್ಚರಿಕೆ ನೀಡಿದರು.ಎಲ್ಲ ಪಕ್ಷಗಳನ್ನು ಅಡ್ಡಾಡಿ ಬಂದು ಇಲ್ಲಿಯೇ ಮೇಲ್ಮನೆ ಸದಸ್ಯರಾದರೂ ಹಳೆಯ ಚಾಳಿ ಬಿಟ್ಡಿಲ್ಲ ಎನ್ನುವ ಚರಂತಿಮಠರ ಆರೋಪಕ್ಕೆ ಉತ್ತರಿಸಿದ ಅವರು, ಚರಂತಿಮಠರ ದಬ್ಬಾಳಿಕೆ ಪ್ರವೃತ್ತಿಯಿಂದಾಗಿ ಪಕ್ಷ ಬಿಟ್ಟಿದ್ದೆ. ದಬ್ಬಾಳಿಕೆ ಪ್ರವೃತ್ತಿ ಇನ್ನಾದರೂ ಬಿಟ್ಟಲ್ಲಿ ಒಳ್ಳೆಯದಾಗಲಿದೆ. ನನ್ನ ವಿರುದ್ಧ ಚರಂತಿಮಠ ವರಿಷ್ಠರಿಗೆ ದೂರು ಹೇಳುವ ಮಾತನ್ನು ಆಡಿದ್ದು, ಅವರು ಮಾಡುತ್ತಿರುವುದನ್ನೂ ವರಿಷ್ಠರ ಗಮನಕ್ಕೆ ತರುವೆ ಎಂದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಹಿಟ್ ಆ್ಯಂಡ್ ರನ್ ಗಿರಾಕಿ ಎಂದು ಲೇವಡಿ ಮಾಡಿದ ಪೂಜಾರ, ಚರಂತಿಮಠರ ಬಗೆಗೆ ವರಿಷ್ಠರಲ್ಲಿ ತೀವ್ರ ಬೇಸರವಿದೆ ಎನ್ನುವುದನ್ನು ಬಿಚ್ಚಿಟ್ಟರು.ಇನ್ನು ಸುಮ್ಮನಿರಲ್ಲ:
ಇನ್ನು ಮುಂದೆ ಪಕ್ಷದಲ್ಲಿ ನಿಮ್ಮ ಧಮಕಿ ನಡೆಯದು. ಪಕ್ಷಕ್ಕೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಸುಮ್ಮನಿದ್ದೆ. ಇನ್ನೂ ಅದು ಅಸಾಧ್ಯ. ನೀವು ದೇಶವೇ ಹೆಮ್ಮೆಯಿಂದ ನೋಡುವ ಬಾಗಲಕೋಟೆ ನಗರ ಪಥಸಂಚಲನ ವೇಳೆ ಅಮಾಯಕ ಹಿಂದು ಕಾರ್ಯಕರ್ತರ ಮೇಲೆ ಮಾನನಷ್ಠ ಮೊಕದ್ದಮೆ ಹಾಕಿದ್ದನ್ನು ಜನತೆ ಇನ್ನೂ ಮರೆತಿಲ್ಲ ಎಂದರು.ಚರಂತಿಮಠರದ್ದು ಹೊಂದಾಣಿಕೆ ರಾಜಕಾರಣ:
ಚರಂತಿಮಠರದ್ದು ಹೊಂದಾಣಿಕೆ ರಾಜಕಾರಣ ಎಂದು ದೂರಿದ ಪೂಜಾರ, ತಮ್ಮ ಮತ್ತು ಜಿ.ಎಸ್. ನ್ಯಾಮಗೌಡರ ಚುನಾವಣೆಯಲ್ಲಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇತರರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವ ಗಂಭೀರ ಆರೋಪ ಮಾಡಿದರು. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟವರು ಇನ್ನಾದರೂ ಒಡಕಿನ ಸಂಸ್ಕೃತಿ ಬಿಡಬೇಕು ಎಂದು ಕಿವಿಮಾತು ಹೇಳಿದರು.---
ಬಾಕ್ಸ್ಕಾರ್ಯಕರ್ತರ ಮೇಲೆಯೇ ಸರ್ವಾಧಿಕಾರಿ ಧೋರಣೆ
ಎರಡು ಬಾರಿ ಶಾಸಕರಾಗಿದ್ದ ನೀವು ಪಕ್ಷದ ಕಾರ್ಯಕರ್ತರಿಗೆ ಬಿಟಿಡಿಎ ಅಧ್ಯಕ್ಷರನ್ನು ಏಕೆ ಮಾಡಲಿಲ್ಲ? ಏಕೆ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎಂದು ಏಕೆ ಅನ್ನಿಸಲಿಲ್ಲ. ಅಧ್ಯಕ್ಷ ಸ್ಥಾನದ ಬಗೆಗೆ ನಿಮಗೇಕೆ ವ್ಯಾಮೋಹ? ಪಕ್ಷದ ಮುಖಂಡರ ಕಣ್ಣಿಗೆ ಮಣ್ಣು ಎರಚಿ, ಕಾರ್ಯಕರ್ತರು ಕಟ್ಟಿದ ಪಕ್ಷದಲ್ಲಿ ಟಿಕೆಟ್ ಪಡೆದು ನೇರವಾಗಿ ಶಾಸಕರಾದವರು ವೀರಣ್ಣ ಚರಂತಿಮಠ. ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ನಡೆಸುವ ಮೂಲಕ ಸರ್ವಾಧಿಕಾರ ಧೋರಣೆ ಮೆರೆಯುತ್ತಿರುವ ಫಲಾನುಭವಿ ನೀವು ಎಂದು ಪೂಜಾರ ಕಿಚಾಯಿಸಿದರು.