ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ತ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಈದ್‌ಮಿಲಾದ್ ಹಬ್ಬವನ್ನು ಬುಧವಾರ ಸಡಗರ ಸಂಭ್ರಮದಿಂದ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಾವೇರಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ತ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಈದ್‌ಮಿಲಾದ್ ಹಬ್ಬವನ್ನು ಬುಧವಾರ ಸಡಗರ ಸಂಭ್ರಮದಿಂದ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮೊಹಮ್ಮದ್ ಪೈಗಂಬರ್ ಅವರ ಹುಟ್ಟಿದ ದಿನವಾದ ಬುಧವಾರ ಮುಸಲ್ಮಾನ ಬಾಂಧವರು ಹೊಸ ಬಟ್ಟೆ ತೊಟ್ಟು ಈದ್‌ಮಿಲಾದ್ ಆಚರಿಸಿ ಸಂಭ್ರಮಿಸಿದರು. ಸುಭಾಸ್ ಸರ್ಕಲ್, ಮುಲ್ಲಾನಕೆರಿ, ಮೆಹಬೂಬ ಸೋಬಾನಿ ದರ್ಗಾ, ದಾವಲ್ ಮಲ್ಲಿಕ್ ದರ್ಗಾ, ಬೊರೆಶಾವಲ್ಲಿ ದರ್ಗಾ, ಸೂಲಮಟ್ಟಿ ಸೇರಿದಂತೆ ದರ್ಗಾಗಳಲ್ಲಿ ಹಾಗೂ ಮಸೀದಿ ಮೊಹಲ್ಲಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ದರ್ಗಾ ಮತ್ತು ಮಸೀದಿಗಳಲ್ಲಿ ನೆರೆದಿದ್ದ ಮುಸಲ್ಮಾನ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲ ಮಸೀದಿಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಈದ್ ಮಿಲಾದ್ ಸಂಭ್ರಮ ಇಮ್ಮಡಿಗೊಳಿಸಿತ್ತು. ಮನೆಗಳಲ್ಲಿ ತಮ್ಮ ತಮ್ಮ ಶಕ್ತ್ಯಾನುಸಾರ ಸಿಹಿ ಅಡುಗೆ ಜತೆಗೆ ಭಕ್ಷ್ಯ ಭೋಜನ ತಯಾರಿಸಿ ಸವಿದರು.

ಮೆಕ್ಕಾ ಮದೀನಾ ಮೆರವಣಿಗೆ:ಈದ್ ಮಿಲಾದ್ ಆಚರಣೆ ನಿಮಿತ್ತ ಮೆಕ್ಕಾ ಮತ್ತು ಮದೀನಾ ಸ್ಥಳಗಳ ಐತಿಹ್ಯ ಸಾರುವ ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಬುಧವಾರ ಮಧ್ಯಾಹ್ನ ನಡೆಯಿತು. ಮೌಲಾನಾ ರಫೀಕ್ ಮುಲ್ಲಾ ಪೈಗಂಬರ್ ಕುರಿತಾದ ಭಾವಗೀತೆ ಹೇಳುತ್ತಾ ಮೆರವಣಿಗೆ ನಡೆಸಿದರು. ನಗರದ ಪಿ.ಬಿ. ರಸ್ತೆಯಲ್ಲಿರುವ ಮೆಹಬೂಬ್ ಸುಬಾನಿ ದರ್ಗಾದಿಂದ ಆರಂಭವಾದ ಮೆರವಣಿಗೆ ಮಣಿಯಾರ ಓಣಿ, ನಗರಸಭೆ ಮುಂಭಾಗ, ಎಂ.ಜಿ ವೃತ್ತ, ಜೆ.ಪಿ. ವೃತ್ತ, ಜೆ.ಎಚ್. ಪಟೇಲ್ ವೃತ್ತ ಮಾರ್ಗವಾಗಿ ಸಂಚರಿಸಿ ಖಬರಸ್ಥಾನ್‌ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪುನಃ ಸುಭಾಷ್ ಸರ್ಕಲ್, ಅಂಬೇಡ್ಕರ್ ವೃತ್ತ, ಪುರದ ಓಣಿ, ಎಂ.ಜಿ. ರೋಡ್, ಜೈನ್ ಬಸದಿ ಬಳಿ ಸಾಗಿ ಮೆಹಬೂಬ್ ಸುಬಾನಿ ದರ್ಗಾವನ್ನು ತಲುಪಿ ಸಂಪನ್ನಗೊಂಡಿತು.

ಈದ್ ಮಿಲಾದ್ ಅಂಗವಾಗಿ ಹಣ್ಣು-ಹಂಪಲು, ಶರಬತ್ ಹಾಗೂ ತಂಪಾದ ಪಾನೀಯಗಳನ್ನು ಬಡವರಿಗೆ ಹಾಗೂ ಸ್ನೇಹಿತರಿಗೆ ವಿತರಿಸಿದರು. ನಗರದಲ್ಲಿ ಆರಂಭವಾಗಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ಮುನಸಿಪಲ್ ಹೈಸ್ಕೂಲ್ ರಸ್ತೆ ಮಾರ್ಗದಲ್ಲಿ ತಂಪು ಪಾನೀಯ ವಿತರಣೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಸಚಿವ ರುದ್ರಪ್ಪ ಲಮಾಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಶಹರ ಕಾಂಗ್ರೆಸ್ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮೆರವಣಿಗೆ ಸಂದರ್ಭದಲ್ಲಿ ಭೇಟಿ ನೀಡಿ ಮುಸಲ್ಮಾನ ಬಾಂಧವರಿಗೆ ಈದ್‌ಮಿಲಾದ ಹಬ್ಬದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ್, ಇಮಾಮಹುಸೇನ ಬಾಲೆಬಾಯಿ, ಮುಜಾಫರ್ ಕೊಟ್ಟಿಗೇರಿ, ಜಮೀರ್‌ಅಹ್ಮದ ಜಿಗರಿ, ಚಮನ್‌ಶರೀಫ್ ಮುಲ್ಲಾ, ಬಾಬುಸಾಬ್ ಮೋಮಿನಗಾರ, ಖಲೀಲ್‌ಸಾಬ್ ಪಟವೇಗಾರ, ಮೋಸಿನ್ ಮುಲ್ಲಾ, ಅಲ್ತಾಫ್ ಬೋರಗಲ್, ಇಕ್ಬಾಲ್ ಶಿಡಗನಾಳ, ರಿಯಾಜ್‌ಅಹ್ಮದ್ ಶಿಡಗನಾಳ, ಅಮೀರಜಾನ್ ಬೇಪಾರಿ, ಶಾಹೀದ ದೇವಿಹೊಸೂರ, ಪೀರಸಾಬ್ ಚೋಪದಾರ, ಅಬ್ದುಲ್‌ರಜಾಕ ಜಮಾದಾರ, ಎಸ್.ಎಸ್. ಖಾಜಿ, ಅತಾವುಲ್ಲಾ ಖಾಜಿ, ಅಲ್ಲಾಭಕ್ಷ ತಿಮ್ಮಾಪೂರ, ನಜೀರ್ ನದಾಫ, ರಾಜೇಸಾಬ್ ಮೊಮಿನಗಾರ, ಇಮ್ತಿಯಾಜ್ ತಿಮ್ಮಾಪುರ, ಸುಭಾನಿ ಚೂಡಿಗಾರ, ನಾಸೀರಖಾನ್ ಪಠಾಣ, ನೂರಅಹ್ಮದ್ ಕರ್ಜಗಿ ಸೇರಿದಂತೆ ಅಂಜುಮನ್ ಪದಾಧಿಕಾರಿಗಳು, ಎಲ್ಲಾ ಮಸೀದಿಯ ಮುತ್ತೋಲಿಗಳು, ಮೌಲಾನಾಗಳು ಮತ್ತಿತರ ಮುಸಲ್ಮಾನ್ ಬಾಂಧವರು ಪಾಲ್ಗೊಂಡಿದ್ದರು.