ಚಾಮರಾಜನಗರ ಗಡಿಭಾಗದ ತಮಿಳುನಾಡಿನಲ್ಲಿ ಸಂಭ್ರಮದ ಗೊರೆಹಬ್ಬ ಆಚರಣೆ

| Published : Nov 04 2024, 12:29 AM IST / Updated: Nov 04 2024, 12:30 AM IST

ಚಾಮರಾಜನಗರ ಗಡಿಭಾಗದ ತಮಿಳುನಾಡಿನಲ್ಲಿ ಸಂಭ್ರಮದ ಗೊರೆಹಬ್ಬ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ಗುಮಟಾಪುರದಲ್ಲಿ ಭಾನುವಾರ ವಿಶೇಷ ಗೊರೆಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿಶೇಷ ಹಬ್ಬ । ಬಲಿಪಾಡ್ಯಮಿ ಮಾರನೆ ದಿನ ನಡೆಯುವ ಉತ್ಸವ । ಸಗಣಿ ರಾಶಿ ಮಾಡಿ ಹೊಡೆದಾಡುವ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ಗುಮಟಾಪುರದಲ್ಲಿ ಭಾನುವಾರ ವಿಶೇಷ ಗೊರೆಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬಲಿಪಾಡ್ಯಮಿ ಮಾರನೆ ದಿನ ನಡೆಯುವ ಈ ಗೊರೆಹಬ್ಬದಲ್ಲಿ ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.

ಸಗಣಿಯ ದೊಡ್ಡ ದೊಡ್ಡ ಮುದ್ದೆಗಳನ್ನು ಕಟ್ಟಿ ವಯಸ್ಸಿನ ಬೇಧವಿಲ್ಲದೆ ಕಿರಿಯರು, ಹಿರಿಯರು, ಯುವಕರು ದಪ್ಪ ಸಗಣಿ ಉಂಡೆಗಳನ್ನು ಒಬ್ಬರಿಗೊಬ್ಬರು ಹೊಡೆದುಕೊಂಡು ಗಮನ ಸೆಳೆದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು, ಬೇರೆ ಜಿಲ್ಲೆಯ ಜನರೂ ಜಮಾಯಿಸಿದ್ದರು. ಸುತ್ತಲು ನೆರೆದಿದ್ದ ಜನರ ಕಿರುಚಾಟ, ಘೋಷಣೆಗಳು ಗೊರೆ ಕಟ್ಟುವವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಸಗಣಿಯಿಂದ ಹೊಡೆದಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆಯು ಇದೆ. ಬೀರೇಶ್ವರನಿಗೆ ಹರಕೆ ಹೊತ್ತವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಇಟ್ಟು ಹಬ್ಬ ಆಚರಿಸಲಾಗುತ್ತಿದೆ.

ಹಬ್ಬದ ಹಿನ್ನೆಲೆ:

ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವಭಕ್ತನಾಗಿದ್ದನಂತೆ. ಆತನ ಮರಣ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗು ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತಂತೆ. ಕಾಲಾನಂತರ ಗೊಬ್ಬರಕ್ಕಾಗಿ ತಿಪ್ಪೆ ಅಗೆಯುತ್ತಿದ್ದಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿತು ಎಂಬ ನಂಬಿಕೆಯಿದೆ. ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಇಲ್ಲಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.

ಸಗಣಿಯಾಟದಲ್ಲಿ ಜಾತಿ ಬೇಧ ಹಾಗು ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಗಣಿಯಾಟಕ್ಕು ಮೊದಲು ದಲಿತ ವ್ಯಕ್ತಿಯೇ ಮೊದಲ ಪೂಜೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಮಳೆಬೆಳೆ ಚನ್ನಾಗಿ ಆಗುತ್ತದೆ ಎಂಬ ನಂಬಿಕೆಯು ಇದೆ. ಮೇಲುನೋಟಕ್ಕೆ ವಿಚಿತ್ರ ಸಂಪ್ರದಾಯದಂತೆ ಕಂಡು ಬರುವ ಈ ಆಚರಣೆಯ ಹಿಂದೆ ಧಾರ್ಮಿಕ ನಂಬಿಕೆ ಇದ್ದೂ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ.