ಸಾರಾಂಶ
ಶಿರಾಳಕೊಪ್ಪ ಬಸ್ಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಓಂ ಗಣೇಶನ ವಿಸರ್ಜನಾ ಮೆರವಣಿಗೆಗೆ ಗ್ರಾಮ ದೇವತೆ ಪೂಜೆಯ ನಂತರ ಕಮಿಟಿ ಸದಸ್ಯರು ಯುವಕರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಇಲ್ಲಿನ ಬಸ್ಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಓಂ ಗಣಪತಿ ವಿಸರ್ಜನಾ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಓಂ ಗಣಪತಿ ಸಮಿತಿ, ಉಡಚಲಮ್ಮ ದೇವಿ ಯುವಕ ಸಂಘ ಹಾಗೂ ಓಂ ಹಿಂದು ಸಂಘಟನಾ ಮಹಾ ಮಂಡಳಿ ಆಶ್ರಯದಲ್ಲಿ ನಡೆಯುತ್ತಿರುವ ವಿಸರ್ಜನಾ ಮೆರವಣಿಗೆ ಪಟ್ಟಣದ ಕೊನೆಯ ಗಣೇಶನ ವಿಸರ್ಜನಾ ಮೆರವಣಿಗೆ ಆಗಿದೆ. ಬಿಗಿ ಪೋಲೀಸ್ ಬಂದೋಬಸ್ತ ನಡುವೆ ಮಧ್ಯಾಹ್ನ ಮೆರವಣಿಗೆ ಬಸ್ಸ್ ನಿಲ್ದಾಣದ ವೃತ್ತದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಶಿಕಾರಿಪುರ ರಸ್ತೆ, ಕೆಳಗಿನಕೇರಿ, ಹೊಂಡದಕೇರಿ ಮುಖಾಂತರ ಹಿರೇಕೆರೂರ ರಸ್ತೆ ಮೂಲಕ ಪುನಃ ಬಸ್ಸ್ ನಿಲ್ದಾಣಕ್ಕೆ ಆಗಮಿಸಿತು.
ಮೆರವಣಿಗೆಯಲ್ಲಿ ಡಿಜೆಗಳ ಶಬ್ಧ, ವಿವಿಧ ವಾದ್ಯಗಳ ತಾಳಕ್ಕೆ ಸಾವಿರಾರು ಯುವಕರು ಮೈ ಮರೆತು ನೃತ್ಯ ಮಾಡುತ್ತಿರುವದನ್ನು ವೀಕ್ಷಿಸಲು ಜನರು ರಸ್ತೆಬದಿ ನಿಂತು ನೋಡಿ ಪ್ರೋತ್ಸಾಹ ಕೊಡುತ್ತಿದ್ದರು. ಪ್ರಾರಂಭದಲ್ಲಿ ಮೆರವಣಿಗೆ ಹೊರಡುವ ಮೊದಲು ಪಟ್ಟಣದ ಗ್ರಾಮದೇವತೆ ಉಡಚಲಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಬೃಹತ್ ಹಾರಗಳನ್ನು ಜೆಸಿಬಿಯಲ್ಲಿ ತಂದು ಗಣೇಶ ಮೂರ್ತಿಗೆ ಹಾಕಲಾಯಿತು. ಸೊರಬ ರಸ್ತೆಯ ಮೂಲಕ ಸಾಗಿ ಗಣೇಶನ ವಿಸರ್ಜನೆ ಪಟ್ಟಣದ ಹೊರವಲಯದ ವಡ್ಡಿನ ಕೆರೆಯಲ್ಲಿನಡೆಯಿತು.ಗಣೇಶ ಸಮಿತಿ ಸಂಚಾಲಕ ರಾಘವೇಂದ್ರ ಪೂಜಾರಿ, ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ವೀರೇಶಸ್ವಾಮಿ, ನಂದೀಶ್ ಅಗಸ್ತ್ಯ, ಮಂಜು, ವಿಜಯ್ ಕಿಚ್ಚ, ರವಿ, ಸಿದ್ದು ಕೇದಾರ, ನಂದೀಶ್ ಕಿಚ್ಚ ಸೇರಿದಂತೆ ಸಮಿತಿ ಸದಸ್ಯರು ನೇತೃತ್ವ ವಹಿಸಿದ್ದರು. ಮೆರವಣಿಗೆ ಹಿನ್ನೆಲೆ ಭಾನುವಾರ ನಡೆಯಬೇಕಿದ್ದ ಸಂತೆ ರದ್ದು ಮಾಡಲಾಗಿತ್ತು. ಸುತ್ತಮುತ್ತಲ ಗ್ರಾಮಸ್ತರು ಪಟ್ಟಣದ ನಾಗರಿಕರ ಅನಕೂಲಕ್ಕಾಗಿ ಭಾನುವಾರ ಸಂತೆಯನ್ನು ಸೋಮವಾರ ನಡೆಸಲು ಪುರಸಭೆ ತಿಳಿಸಿದೆ.