ಸಾರಾಂಶ
ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳು ಮಧ್ಯವರ್ತಿಗಳು, ಏಜೆಂಟರಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.
ಹೊಸಪೇಟೆ: ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಈ ನೆಲದ ದಲಿತ, ಬಡ, ಶೋಷಿತ ಸಮುದಾಯಗಳ ಬಗ್ಗೆ ಕಿಂಚಿತ್ತೂ ಚಿಂತಿಸಿಲ್ಲ. ಆದರೆ, ನಮ್ಮ ಸರ್ಕಾರದ ವಿವಿಧ ಯೋಜನೆಗಳು ತಳ ಸಮುದಾಯ ಜನರ ಬದುಕನ್ನು ಹಸನಾಗಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಪ್ರಮುಖ ಮೂರು ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ೧೧೭ ಫಲಾನುಭವಿಗಳು ಸೇರಿದಂತೆ ದೇಶಾದ್ಯಂತ ಸುಮಾರು ೪೦೦ ಜಿಲ್ಲೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳು ಮಧ್ಯವರ್ತಿಗಳು, ಏಜೆಂಟರಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ದೇಶಾದ್ಯಂತ ₹೪೨೦ ಕೋಟಿ ಸಾಲ ನೀಡಲಾಗಿದೆ. ಬಡವರು ತಮ್ಮ ಕನಸಿನ ವ್ಯಾಪಾರ, ಯೋಜನೆಗಳನ್ನು ಸಾಕಾರಗೊಳಿಸಿಕೊಂಡು ಜೀವನದಲ್ಲಿ ಗುಣಾತ್ಮಕ ಬದಲಾವಣೆ ಕಾಣುತ್ತಿರುವುದು ಸರ್ಕಾರದ ಹೆಮ್ಮೆಯ ಸಂಗತಿ ಎಂದರು.ಇದೇ ವೇಳೆ ವಿವಿಧ ರಾಜ್ಯಗಳ ಫಲಾನುಭವಿಗಳೊಂದಿಗೆ ಯೋಜನೆ ಕುರಿತು ಸಂವಾದ ನಡೆಸಿದರು. ಆದರೆ ಸಂವಾದದಲ್ಲಿ ಕರ್ನಾಟಕದವರಿಗೆ ಅವಕಾಶ ಸಿಗಲಿಲ್ಲ.ಇದಕ್ಕೂ ಮುನ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕ ನೀರಜ್ ಕುಮಾರ್ ಮಾತನಾಡಿ, ನ್ಯಾಷನಲ್ ಬ್ಯಾಕ್‌ವರ್ಡ್ ಕ್ಲಾಸಸ್ ಫೈನಾನ್ಸ್ ಫಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಬಿಸಿಎಫ್‌ಡಿಸಿ), ನ್ಯಾಷನಲ್ ಶೆಡ್ಯೂಲ್ ಕಾಸ್ಟ್ ಫೈನಾನ್ಸ್ ಫಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಸ್‌ಎಫ್‌ಡಿಸಿ), ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಫಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎಸ್‌ಕೆಎಫ್‌ಡಿಸಿ) ವತಿಯಿಂದ ಜಿಲ್ಲೆಯ ೧೧೭ ಫಲಾನುಭವಿಗಳು ಸಾಲ ಪಡೆದಿದ್ದರು. ಜಿಲ್ಲೆಯ ಲೀಡ್ ಬ್ಯಾಂಕ್ ಆಗಿರುವ ಎಸ್‌ಬಿಐ ಉಸ್ತುವಾರಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಮುಖವಾಗಿ ಈ ಸಾಲ ವಿತರಿಸಿದ್ದು, ಕೆನರಾ ಬ್ಯಾಂಕ್ ಕೈಜೋಡಿಸಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಭೀಮಪ್ಪ ಕೆ. ಸೇರಿದಂತೆ ವಿವಿಧ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳಿದ್ದರು.ಜನ ಕಲ್ಯಾಣಕ್ಕಾಗಿ ಸರ್ಕಾರ ಒದಗಿಸುವ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸಕಾಲಕ್ಕೆ ಮರು ಪಾವತಿ ಮಾಡಬೇಕು. ಇದರಿಂದ ವ್ಯಾಪಾರ, ವಹಿವಾಟಿನಲ್ಲಿ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಖಾಸಗಿ ಲೇವಾದೇವಿಗಳ ಬಲೆಗೆ ಸಿಲುಕುವುದೂ ತಪ್ಪುತ್ತದೆ. ಈ ಬಗ್ಗೆ ಬ್ಯಾಂಕ್ ಗ್ರಾಹಕರು ಗಮನ ಹರಿಸಬೇಕು ಎನ್ನುತ್ತಾರೆ ಲೀಡ್ ಬ್ಯಾಂಕ್ ಪ್ರಬಂಧಕ ಬಾಲಕೃಷ್ಣ ಭಟ್.