ಕೇಂದ್ರ ಸರ್ಕಾರ ಅಭಿವೃದ್ಧಿಗೆ ಬದ್ಧ

| Published : Oct 01 2025, 01:00 AM IST

ಸಾರಾಂಶ

ಕುಂದಗೋಳ, ಸಂಶಿ, ಕಳಸ ಮತ್ತು ಗುಡಗೇರಿ ರೈಲು ನಿಲ್ದಾಣಗಳ ಅಭಿವೃದ್ಧಿ ಹಾಗೂ ₹7,000 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕುಂದಗೋಳ:

ಕೇಂದ್ರ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದ್ದು, ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ರೈಲ್ವೆ ಸೇರಿದಂತೆ ಮೂಲಸೌಕರ್ಯ ವಲಯಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಒಒದಗಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ತಾಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ರಾಜೀವಗಾಂಧಿ ಸೇವಾಕೇಂದ್ರ, 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಿರ್ಮಿಸಲಾದ ಭೋಜನಾಲಯ, ಎನ್‌ಆರ್‌ಎನ್‌ಎಂ ಕಟ್ಟಡ, ಗ್ರಾಮೀಣ ಗೋದಾಮು ಹಾಗೂ ಅಂಗನವಾಡಿ ಕಟ್ಟಡ ಮತ್ತು ನೂತನ ಗ್ರಾಪಂ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅಡಿಯಲ್ಲಿ ಕುಂದಗೋಳ ಕ್ಷೇತ್ರಕ್ಕೆ ₹123 ಕೋಟಿ ಮಂಜೂರು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹88 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿಎಸ್‌ಆರ್ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ 350-400 ಹೊಸ ಶಾಲಾ ಕೊಠಡಿ ನಿರ್ಮಿಸಲಾಗಿದೆ ಎಂದ ಸಚಿವರು, ಶಾಲೆ ಅಭಿವೃದ್ಧಿಯಾದರೆ ಮಾತ್ರ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕುಂದಗೋಳ, ಸಂಶಿ, ಕಳಸ ಮತ್ತು ಗುಡಗೇರಿ ರೈಲು ನಿಲ್ದಾಣಗಳ ಅಭಿವೃದ್ಧಿ ಹಾಗೂ ₹7,000 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ ಎಂದರು.

ಇದಕ್ಕೂ ಮುನ್ನ ಮಳಲಿ ಗ್ರಾಮದಲ್ಲಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಯೋಜನೆಯ ಅನುದಾನದಡಿ ಗುರುವಿನಹಳ್ಳಿ ವಾಯಾ ಮಳಲಿ ಗ್ರಾಮದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ (₹3.30 ಕೋಟಿ ಅಂದಾಜು) ಸಚಿವರು ಭೂಮಿ ಪೂಜೆ ನೆರವೇರಿಸಿದರು. ಕೋಲ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಲ್ಲಿ ಕುಂಕೂರು ಗ್ರಾಮದಲ್ಲಿ ₹27.80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 2 ನೂತನ ಶಾಲಾ ಕೊಠಡಿ ಲೋಕಾರ್ಪಣೆಗೊಳಿಸಿದರು.ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ತಾಲೂಕಿಗೆ ₹300 ರಿಂದ ₹400 ಕೋಟಿಗೂ ಅಧಿಕ ಅನುದಾನ ಬಂದಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತಾಲೂಕಿಗೆ 20 ಸೇತುವೆ ಮಂಜೂರಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ ಮಾತನಾಡಿ, ಒಂದು ಕಾಲದಲ್ಲಿ ಅನಾಥವಾಗಿದ್ದ ಗುರುವಿನಹಳ್ಳಿ ಗ್ರಾಮಕ್ಕೆ ಮರುಜೀವ ನೀಡಿ, ನೂತನ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ತಂದಿದ್ದು ದಿ. ಸಿ.ಎಸ್. ಶಿವಳ್ಳಿ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಸಂಸ್ಥಾನ ಮಠದ ಫಕ್ಕೀರಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾಸಲಾಯಿತು. ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಹಾಗೂ ತಿರುಮಲಕೊಪ್ಪದ ದಾನಯ್ಯ ದೇವರು ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ರಾಜು ಮಾವರಕ, ಇಒ ಜಗದೀಶ ಕಮ್ಮಾರ, ಪಿಡಿಒ ಬಸವರಾಜ ಬಾಗಲ, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಪಡೆಸೂರ, ಕಲ್ಲವ್ವ ಇಂಗಳಗಿ, ಕಾಶವ್ವ ಹುತ್ತನಗೌಡ್ರ, ಪಾರ್ವತೆವ್ವ ಬಾರಕೇರ, ರಾಜಕುಮಾರ ನವಲೂರ, ಅಬ್ದುಲಸಾಬ ಅಕ್ಕಿ, ಪರಶುರಾಮ ಮಾಡಲಗಿ, ಗುರುಪಾದಪ್ಪ ಇಚ್ಚಂಗಿ, ಗುರು ಪಾಟೀಲ, ನಾಗನಗೌಡ ಸಾತ್ಮಾರ, ಸಿ.ವೈ. ಹಿರೇಗೌಡ್ರ, ಪ್ರಕಾಶ್ ಕುಬಿಹಾಳ, ಎನ್.ಎನ್. ಪಾಟೀಲ್, ಹುಸೇನ್ ಹುಬ್ಬಳ್ಳಿ, ಸಿದ್ದರಾಮ ಸೇರಿದಂತೆ ಅನೇಕರಿದ್ದರು.