ನಾಡಿನ ಜನರ ಕಣ್ಣಿಗೆ ಕೇವಲ ರಾಜ್ಯ ಸರ್ಕಾರವಷ್ಟೇ ಕಾಣುತ್ತಿದೆ. ನಮ್ಮ ರಾಜ್ಯದ ತೆರಿಗೆ ಹಣವನ್ನು ನಮಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ರಾಜ್ಯದ ನಾಲ್ಕು ಮಂದಿ ಕೇಂದ್ರ ಸಚಿವರು, ಸಂಸದರು ಕೇಂದ್ರ ಸರ್ಕಾರದ ಮುಂದೆ ಈ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಡ್ಲೆಕಾಯಿ ತಿನ್ನುತ್ತಿರಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದ್ದರೂ ಕೇಂದ್ರ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ. ಬೇರೆ ರಾಜ್ಯಗಳಿಗೆ ಬೇಕಾದಷ್ಟು ಅನುದಾನ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ತಾಲೂಕಿನ ಬೆಳ್ಳೂರಿನಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ 73ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಸಚಿವರು, ನಾಡಿನ ಜನರ ಕಣ್ಣಿಗೆ ಕೇವಲ ರಾಜ್ಯ ಸರ್ಕಾರವಷ್ಟೇ ಕಾಣುತ್ತಿದೆ. ನಮ್ಮ ರಾಜ್ಯದ ತೆರಿಗೆ ಹಣವನ್ನು ನಮಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ರಾಜ್ಯದ ನಾಲ್ಕು ಮಂದಿ ಕೇಂದ್ರ ಸಚಿವರು, ಸಂಸದರು ಕೇಂದ್ರ ಸರ್ಕಾರದ ಮುಂದೆ ಈ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಡ್ಲೆಕಾಯಿ ತಿನ್ನುತ್ತಿರಬೇಕು ಎಂದು ಲೇವಡಿ ಮಾಡಿದರು.

ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಮಾಡಿ, ರಾಜ್ಯ ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದೆ. ಆದರೆ, ರೈತರಿಗೆ ಆಸರೆಯಾದ ನಮ್ಮ ಸರ್ಕಾರದ ಮೇಲೆ ಬಿಜೆಪಿ ಜೆಡಿಎಸ್ ಗೂಬೆ ಕೂರಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ವಿಪಕ್ಷಗಳ ಇಂತಹ ಕೆಲಸಗಳನ್ನು ಸಾರ್ವಜನಿಕರೇ ಪ್ರಶ್ನಿಸಬೇಕು ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಹಕಾರ ಕ್ಷೇತ್ರಕ್ಕಿಂತ ದೊಡ್ಡ ಸಾಧನ ಮತ್ತೊಂದಿಲ್ಲ. ಇಂತಹ ಪವಿತ್ರ ಸಹಕಾರ ಕ್ಷೇತ್ರವು ರಾಜಕೀಯ ಮುಕ್ತವಾಗಿರಬೇಕು. ಕೃಷಿ ಪ್ರಧಾನವಾದ ಜಿಲ್ಲೆಯ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದರೆ ಅದಕ್ಕೆ ನಮ್ಮ ಸಹಕಾರ ಸಂಘಗಳೇ ಕಾರಣ ಎಂದರು.

ಬಡವರು ಮತ್ತು ಮಧ್ಯಮ ವರ್ಗದವರು ಖಾಸಗಿ ಲೇವಾದೇವಿದಾರರ ಶೋಷಣೆಯಿಂದ ಮುಕ್ತರಾಗಿ ಸ್ವಾಭಿಮಾನದಿಂದ ಬದುಕಲು ಸಹಕಾರಿ ಬ್ಯಾಂಕುಗಳು ಆಸರೆಯಾಗಿವೆ. ಸಹಕಾರಿ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ ಎಂದರು.

ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ರೈತರು ಯಶಸ್ಸು ಕಾಣಲು ಸಹಕಾರಿ ವ್ಯವಸ್ಥೆಯೇ ಮೂಲ ಕಾರಣ. ರಾಜ್ಯ ಸರ್ಕಾರವೂ ಕೂಡ ಸಹಕಾರ ಕ್ಷೇತ್ರದ ಬಲವರ್ಧನೆಗೆ ಸದಾ ಬದ್ಧವಾಗಿದೆ. ರೈತರ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಪ್ರತಿಯೊಬ್ಬ ಸದಸ್ಯರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಹಕಾರ ಸಂಘಗಳು ಕೇವಲ ಸಾಲ ನೀಡುವುದಕ್ಕೆ ಸೀಮಿತವಾಗದೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ ಮತ್ತು ಗೋದಾಮು ನಿರ್ಮಾಣದಂತಹ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಹಕಾರ ಕ್ಷೇತ್ರವು ರಾಜಕೀಯ ರಹಿತವಾಗಿ ಬೆಳೆಯಬೇಕು. ಚುನಾವಣೆಗಳು ಕೇವಲ ಆಡಳಿತ ಮಂಡಳಿ ಆಯ್ಕೆಗೆ ಸೀಮಿತವಾಗಿರಲಿ. ಒಮ್ಮೆ ಆಯ್ಕೆಯಾದ ಮೇಲೆ ಎಲ್ಲರೂ ಒಂದಾಗಿ ರಾಜಕೀಯೇತರವಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ನಂದೀಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಸಿ.ಜೋಗಿಗೌಡ ಮಾತನಾಡಿದರು. ಸಹಕಾರ ಸಪ್ತಾಹದ ಮಹತ್ವ ಕುರಿತು ಮದ್ದೂರು ತಾಲೂಕು ಭಾರತಿಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪುಟ್ಟಸ್ವಾಮಿಗೌಡ ಪ್ರಧಾನ ಭಾಷಣ ಮಾಡಿದರು.

ಸಮಾರಂಭದ ವೇದಿಕೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಸಾಧಕರು ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ವಿ.ದಿನೇಶ್ ಅವರನ್ನು ಸನ್ಮಾನಿಸಲಾಯಿತು. ಮನ್ಮುಲ್ ಅಧ್ಯಕ್ಷ ಹರೀಶ್‌ಬಾಬು, ಎಂಡಿಸಿಸಿ ಬ್ಯಾಂಕ್‌ನ ಸಿಇಒ ಸಿ.ವನಜಾಕ್ಷಿ, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ, ಡಿ.ಟಿ.ಕೃಷ್ಣೇಗೌಡ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮೂಡ್ಲೀಗೌಡ ಸೇರಿದಂತೆ ಹಲವರು ಇದ್ದರು.