ಕೇಂದ್ರ ಸರ್ಕಾರದ ಭರವಸೆ ಸುಳ್ಳಾಗಿವೆ: ಶಾಸಕ ಅನ್ನಪೂರ್ಣ ತುಕಾರಾಂ

| Published : Oct 12 2025, 01:01 AM IST

ಕೇಂದ್ರ ಸರ್ಕಾರದ ಭರವಸೆ ಸುಳ್ಳಾಗಿವೆ: ಶಾಸಕ ಅನ್ನಪೂರ್ಣ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳು ಸುಳ್ಳಾಗಿವೆ.

ಸಂಡೂರು: ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳು ಸುಳ್ಳಾಗಿವೆ. ವಾರ್ಷಿಕ 2 ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ. ಕೇಂದ್ರ ಸರ್ಕಾರ ಯುವಜನತೆಯನ್ನು ನಿರಾಸೆಯ ಬದುಕಿಗೆ ದೂಡಿದೆ ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಆರೋಪಿಸಿದರು.ಪಟ್ಟಣದ ಪುರಸಭೆ ಬಸ್ ನಿಲ್ದಾಣದಲ್ಲಿ ಶನಿವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ. ಮೂರ್ತಿಗಳ ಸ್ಥಾಪನೆಗೆ ಖರ್ಚು ಮಾಡುವ ಹಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೆ, ಜನತೆಗೆ ಉದ್ಯೋಗ ದೊರಕುತ್ತಿತ್ತು. ಜನತೆ ಈ ಕುರಿತು ಜಾಗೃತರಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಒಟ್ಟಾಗಿ ಶ್ರಮಿಸಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನತೆಗೆ ಹಲವು ರೀತಿಯಲ್ಲಿ ಉಪಯೋಗವಾಗಿವೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶದ ಜನತೆಯನ್ನು ಒಂದು ಮಾಡಲು ಶ್ರಮಿಸಿದ್ದಾರೆ. ರಾಹುಲ್ ಗಾಂಧಿಯವರ ಕೈಯ್ಯನ್ನು ಬಲಪಡಿಸೋಣ. ದೇಶದ ಜನತೆಗೆ ಉತ್ತಮ ಭವಿಷ್ಯವನ್ನು ರೂಪಿಸೋಣ ಎಂದರು.

ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ ಮಾತನಾಡಿ, ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ಘಟನೆ ನಡೆದಿದೆ ಎಂದರೆ, ದೇಶದಲ್ಲಿ ಸಾಮಾನ್ಯ ವ್ಯಕ್ತಿಯ ಪರಿಸ್ಥಿತಿ ಹೇಗೆ? ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇದು ಮೊದಲಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತಕಳ್ಳತನ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಕೇಂದ್ರದ ದಲಿತ ವಿರೋಧಿ ನೀತಿಗಳನ್ನು ಜನರ ಬಳಿ ತೆಗೆದುಕೊಂಡು ಹೋಗಿ, ಜನತೆಯನ್ನು ಜಾಗೃತಗೊಳಿಸಬೇಕು ಎಂದು ತಿಳಿಸಿದರು.

ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಕೇಂದ್ರ ಸರ್ಕಾರದಿಂದ ದಲಿತರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತೀವ್ರ ಅನ್ಯಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬೃಹತ್ ಅಭಿಯಾನ ರೂಪಿಸಬೇಕು. ದಲಿತರಿಗೆ ನ್ಯಾಯ ಒದಗಿಸಬೇಕಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ತಾಲ್ಲೂಕಿನಲ್ಲಿ 1.21 ಲಕ್ಷ ತಾಯಂದಿರಿಗೆ ಗೃಹಲಕ್ಷಿ ಹಣ ತಲುಪುತ್ತಿದೆ. 500 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇದು ಗಿನ್ನಿಸ್ ದಾಖಲೆ ಸೇರಿದೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಹಳ್ಳಿ ಸಿದ್ದೇಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್‌ಕೆ.ಎಸ್. ಮಂಜುನಾಥ್ ಸ್ವಾಗತಿಸಿದ್ದಲ್ಲದೆ, ಕೇಂದ್ರ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಖಂಡಿಸಿದರು.

ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಆದಿಲ್, ಆಕಾಶ್, ದೀಪಕ್, ಶ್ರೀಧರ್ ಜಾಧವ್, ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಸದಸ್ಯ ಎಲ್.ಹೆಚ್. ಶಿವಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಅಸೆಂಬ್ಲಿ ಘಟಕದ ಅಧ್ಯಕ್ಷ ಬಸವರಾಜ್ ಬ್ರೂಸ್ಲಿ, ಗೋವಿಂದ, ರಿಯಾಜ್, ಮದರ್ ಬಾಷ, ರುದ್ರಗೌಡ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಮುಖಂಡರು ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.