ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ವಿವಿಧ ಪದವಿಗಳನ್ನು ಪಡೆದ ವಿದ್ಯಾರ್ಥಿಗಳೊಂದಿಗೆ ವೈದ್ಯಕೀಯ ಶಿಕ್ಷಣ ಡಾ. ಶರಣಪ್ರಕಾಶ್ ಪಾಟೀಲ್, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು ಇದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಸೇವೆ ಬಲವರ್ಧಿಸಲು ಉತ್ತರ ಕ್ಯಾಂಪಸ್‌ನಲ್ಲಿ ಪಾಲಿಟ್ರಾಮಾ, ಸೆಂಟ್ರಲ್ ಕ್ಯಾಂಪಸ್‌ನಲ್ಲಿ ಒಪಿಡಿ ಕೇಂದ್ರ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.ಶನಿವಾರ ನಿಮ್ಹಾನ್ಸ್‌ನ 28ನೇ ಘಟಿಕೋತ್ಸವದಲ್ಲಿ ಅವರು ಆನ್‌ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದರು.
ಪಾಲಿಟ್ರಾಮಾ ಕೇಂದ್ರವನ್ನು ಹೊಸ ಉತ್ತರ ಕ್ಯಾಂಪಸ್ ನಲ್ಲಿ ( ಕ್ಯಾಲಸನಹಳ್ಳಿ) 40 ಎಕರೆಯಲ್ಲಿ ₹ 498 ಕೋಟಿ ಮೊತ್ತದಲ್ಲಿ 300 ಬೆಡ್‌ಗಳ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದೆ. ಇದರಿಂದ ಬೆಂಗಳೂರು ಸೇರಿ ರಾಜ್ಯದಲ್ಲಿನ ಅಪಘಾತ ಸೇರಿದಂತೆ ಇತರೆ ಗಾಯಾಳುಗಳ ಚಿಕಿತ್ಸೆಗೆ ನೆರವಾಗಲಿದೆ ಎಂದರು.ಜತೆಗೆ ಸೆಂಟ್ರಲ್ ಕ್ಯಾಂಪಸ್‌ನಲ್ಲಿ ₹ 440 ಕೋಟಿ ಮೊತ್ತದಲ್ಲಿ ಹೊಸ 4ಮಹಡಿಗಳ ಒಪಿಡಿ ಕಾಂಪ್ಲೆಕ್ಸ್ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು 590 ಕ್ಲಿನಿಕ್, ಕೌನ್ಸೆಲಿಂಗ್ ಕೊಠಡಿಗಳನ್ನು ಹೊಂದಿರಲಿದೆ. ಪ್ರತಿದಿನ ಸುಮಾರು 5ಸಾವಿರ ರೋಗಿಗಳಿಗೆ ಸೇವೆ ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ ಎಂದು ತಿಳಿಸಿದರು.ಮಾನಸಿಕ ಆರೋಗ್ಯ, ನರವಿಜ್ಞಾನದಲ್ಲಿ ನಿಮ್ಹಾನ್ಸ್ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಟೆಲಿಮನಸ್ ಮೂಲಕ ಉನ್ನತ ಗುಣಮಟ್ಟದ ಆನ್‌ಲೈನ್ ಆರೋಗ್ಯ ಸೇವೆ ನೀಡುತ್ತಿದೆ. ಇದರ ಟೋಲ್‌ಫ್ರೀ ಸಂಖ್ಯೆಯು 30 ಲಕ್ಷ ಕರೆಗಳನ್ನು ಸ್ವೀಕರಿಸಿ ಸ್ಪಂದಿಸುವ ಮೂಲಕ ಪರಿಣಾಮಕಾರಿಯಾಗಿ ವ್ಯಾಪಕ ಸೇವೆ ನೀಡುತ್ತಿದ್ದು, ದೇಶ ಮಟ್ಟದಲ್ಲಿ ಇಂತ ಸೇವೆಗಳ ಅಗತ್ಯವಿದೆ. ಕಲ್ಯಾಣ ಕರ್ನಾಟಕ, ದೇಶದ ಈಶಾನ್ಯ ರಾಜ್ಯಗಳಿಗೆ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ವೈದ್ಯರನ್ನು ರೂಪಿಸಬೇಕು ಎಂದರು.
ಕೃತಕ ಬುದ್ಧಿಮತ್ತೆ-ಚಾಲಿತ ಡಿಜಿಟಲ್ ಪ್ಲಾಟ್‌ಫಾರ್ಮ್, ವ್ಯಸನಕಾರಿ ಸಾಮಾಜಿಕ ಮಾಧ್ಯಮ ಅಲ್ಗಾರಿದಮ್ ಮತ್ತು ಅತಿಯಾದ ಸ್ಮಾರ್ಟ್‌ಫೋನ್ ಅವಲಂಬನೆಯಂತಹ ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುತ್ತಿವೆ. ಮೆದುಳಿನ ಬೆಳವಣಿಗೆ, ನಡವಳಿಕೆ, ಕಲಿಕೆ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಇವು ಪರಿಣಾಮ ಬೀರುತ್ತಿದೆ. ಇಂತಹ ಸಂಭಾವ್ಯ ಹೆಚ್ಚಿನ ಸಮಸ್ಯೆ ನಿರ್ವಹಣೆಗೆ ಸಜ್ಜಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ವೈದ್ಯಕೀಯ ಶಿಕ್ಷಣ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಹೆಚ್ಚುತ್ತಿರುವ ಮನೋವೈದ್ಯಕೀಯ ಮತ್ತು ಮಾನಸಿಕ ಅಸ್ವಸ್ಥತೆಗಳ ಸವಾಲು ಎದುರಿಸಲು ವಿಶೇಷ ನವೀಕೃತ ಮತ್ತು ನಾವೀನ್ಯತಾ ಪ್ರಯತ್ನ ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.
ನರ ರೋಗ, ಸೋಂಕು, ಮಾನಸಿಕ ಆರೋಗ್ಯ ಸಮಸ್ಯೆ, ತಾಯಿ ಮತ್ತು ಮಕ್ಕಳ ಮಾನಸಿಕ ಸಮಸ್ಯೆ, ಹದಿಹರೆಯದವರ ಆತ್ಮಹತ್ಯೆ, ಮಾದಕ ದ್ರವ್ಯ ಬಳಕೆಯ ಅಸ್ವಸ್ಥತೆ ಮತ್ತು ವೃದ್ಧಾಪ್ಯದ ಮಾನಸಿಕ ಆರೋಗ್ಯ ಸೇವೆ ಒದಗಿಸಲು ವಿಶೇಷ ಸೌಲಭ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದರು.ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ನಿಮ್ಹಾನ್ಸ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಕಳೆದ ವರ್ಷ ದಾಖಲೆಯ 6,85,960 ರೋಗಿಗಳಿಗೆ ಸೇವೆ ಕಲ್ಪಿಸಿದ್ದು, ಲ್ಯಾಬೋರೆಟರಿ ಮೂಲಕ 23.5ಲಕ್ಷ ರೋಗಿಗಳಿಗೆ ರೋಗನಿರ್ಣಯ ಮಾಡಿದ್ದೇವೆ. 8 ಸಾವಿರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
28ನೇ ಘಟಿಕೋತ್ಸವದಲ್ಲಿ 251 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜತೆಗೆ 28 ವಿದ್ಯಾರ್ಥಿಗಳು ವಿಷಯಾಧಾರಿತ ಪದಕ ಪಡೆದರು.