ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಹಾರ ಧಾನ್ಯಗಳ ಗುಣಮಟ್ಟದ ಕೊರತೆ ಹಾಗೂ ವೃದ್ಧಾಶ್ರಮದ ಮೂಲಸೌಕರ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ ಗಜಾನನ ಬಾಲೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಹಾರ ಧಾನ್ಯಗಳ ಗುಣಮಟ್ಟದ ಕೊರತೆ ಹಾಗೂ ವೃದ್ಧಾಶ್ರಮದ ಮೂಲಸೌಕರ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ ಗಜಾನನ ಬಾಲೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.

ಜಮಖಂಡಿ ತಾಲೂಕಿನ ವಿವಿಧ ಸರ್ಕಾರಿ ಸಂಸ್ಥೆಗಳು, ವಸತಿ ನಿಲಯಗಳು ಹಾಗೂ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಮಖಂಡಿಯ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಿಇಒ ಅವರು ವಾರ್ಡಗಳು, ಪ್ರಯೋಗಾಲಯ ಹಾಗೂ ಅಡುಗೆಮನೆ ಪರಿಶೀಲಿಸಿದರು. ಸ್ವಚ್ಛತೆಯ ಕೊರತೆ ಮತ್ತು ಆಹಾರ ತಯಾರಿಕೆಯ ಕಳಪೆ ಗುಣಮಟ್ಟ ಕಂಡುಬಂದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯದ ವೇಳೆ ಹಾಜರಿರದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕರಿಯಣ್ಣವರ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರದ ಕೊರತೆಯಿಂದ ರೋಗಿಗಳು ಖಾಸಗಿ ಕೇಂದ್ರಗಳನ್ನು ಅವಲಂಬಿಸುತ್ತಿರುವ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಯಂತ್ರ ಮಂಜೂರಿಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಶೈಕ್ಷಣಿಕ ಪ್ರಗತಿ ಹಾಗೂ ವಿಷನ್ 90+ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯಗಳ ಗೋದಾಮು ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಮಳಿಗೆ ಪರಿಶೀಲಿಸಿದಾಗ ಗುಣಮಟ್ಟದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.

ಜಮಖಂಡಿಯ ಜೈ ಭಾರತ ಮಾತಾ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೃದ್ಧರಿಗೆ ಕಲ್ಪಿಸಿರುವ ವಸತಿ, ಕೊಠಡಿಗಳು ಹಾಗೂ ಶೌಚಾಲಯಗಳ ವ್ಯವಸ್ಥೆ ಪರಿಶೀಲಿಸಿದರು. ಶೀಟ್‌ಗಳಿಂದ ನಿರ್ಮಿಸಿರುವ ಕೊಠಡಿಗಳಲ್ಲಿ ಅತಿಯಾದ ಉಷ್ಣತೆ ಹಾಗೂ ಶೌಚಾಲಯಗಳ ಅಸಮರ್ಪಕ ವ್ಯವಸ್ಥೆ ಕಂಡುಬಂದಿದ್ದು, ವಾರದೊಳಗೆ ಮೂಲಸೌಲಭ್ಯಗಳ ಸುಧಾರಿಸುವಂತೆ ಎನ್.ಜಿ.ಒಗೆ ಗಡುವು ನೀಡಿದರು. ಹಿಪ್ಪರಗಿಯಲ್ಲಿ ಡಿಬಿಒಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಪ್ರಗತಿ, ಗುಣಮಟ್ಟ ಹಾಗೂ ಅನುಷ್ಠಾನದ ಸ್ಥಿತಿ ವೀಕ್ಷಿಸಿದರು.

ಭೇಟಿ ಸಂದರ್ಭದಲ್ಲಿ ಜಮಖಂಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ. ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಕೀಜೀ, ತಾಪಂ ಸಹಾಯಕ ನಿರ್ದೇಶಕ ಸಂಜು ಹಿಪ್ಪರಗಿ, ಸುರೇಶ ಪಂಚಾಳ, ಸಹಾಯಕ ಲೆಕ್ಕಾಧಿಕಾರಿ ನರೇಂದ್ರ ಕೆಂಪನ್ನವರ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೀನು ಸಾಕಾಣಿಕೆ ಉದ್ಯಮಕ್ಕೆ ಸಿಇಒ ಮೆಚ್ಚುಗೆ: ಜಮಖಂಡಿ ತಾಲೂಕಿನ ಅಲಬಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಯಾಜ್ ಮೋಹನ್ ಶೇಖ್ ಅವರು 10 ಎಕರೆ ಸವಳು-ಜವಳು ಭೂಮಿಯಲ್ಲಿ ಕೈಗೊಂಡಿರುವ ಮೀನು ಸಾಗಾಣಿಕೆ ಚಟುವಟಿಕೆ ವೀಕ್ಷಣೆ ಮಾಡಿದರು. ಕೃಷಿಗೆ ಸವಾಲಾಗಿರುವ ಭೂಮಿಯನ್ನು ಪರ್ಯಾಯ ಉದ್ಯಮಕ್ಕೆ ಬಳಸಿಕೊಂಡು ಆದಾಯ ಗಳಿಸುತ್ತಿರುವ ಅವರ ಪ್ರಯತ್ನ ಶ್ಲಾಘಿಸಿದರು. ಇಂತಹ ಮಾದರಿಗಳನ್ನು ಇತರೆ ರೈತರು ಹಾಗೂ ಯುವಕರಿಗೂ ಪರಿಚಯಿಸಿ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಬೇಕಿದೆ ಎಂದು ಜಿಪಂ ಸಿಇಒ ಗಜಾನನ ಬಾಲೆ ತಿಳಿಸಿದರು.