ಸಾರಾಂಶ
ರಾಯಚೂರು: ಸಿರಿಧಾನ್ಯ ಮತ್ತು ಸಾವಯವ ಮೇಳ, ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು ಜ.5, 6 ಮತ್ತು 7ರಂದು ಬೆಂಗಳೂರು ಅರಮನೆಯಲ್ಲಿ ಆಯೋಜಿಸಿದ ಹಿನ್ನೆಲೆಯಲ್ಲಿ ಡಿ.23ರಂದು ನಗರದಲ್ಲಿ ಸಿರಿಧಾನ್ಯ ಜಾಗೃತಿ ನಡಿಗೆ ಹಾಗೂ ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದರು.
ಸ್ಥಳೀಯ ಕೃಷಿ ಇಲಾಖೆ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯ ಮತ್ತು ಸಾವಯವ ಮೇಳ 2024ರ ಪ್ರಯುಕ್ತ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ವ್ಯಾಪಕವಾಗಿ ಸಿರಿಧಾನ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.ಜಿಲ್ಲಾ ಮಟ್ಟದ ಮೇಳಗಳನ್ನು ಡಿಸೆಂಬರ್ 3ನೇ ವಾರದೊಳಗೆ ಪೂರ್ಣಗೊಳಿಸುವ ಗುರಿ ಹಾಕಕೊಳ್ಳಲಾಗಿದೆ. ಈಚೆಗೆ ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. ಅದರಲ್ಲಿ ವಿಜೇತರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತೆ-ನ್ಯೂಟ್ರಿ ಸಿರಿಧಾನ್ಯ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಹಾಗೂ ಸಿರಿಧಾನ್ಯ ಹಬ್ಬವನ್ನು 23ರಂದು ಹಮ್ಮಿಕೊಳ್ಳಲಾಗಿದೆ.ಕೃಷಿ ವಿವಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಿರಿಧಾನ್ಯ ಬೆಳೆಗಾರರನ್ನು ಸನ್ಮಾನಿಸಲಾಗುವುದು. ಅಲ್ಲದೇ, ಸಿರಿಧಾನ್ಯಕ್ಕೆ ಸಂಬಂಧಿಸಿದ ಮಳಿಗೆಗಳು ಕೂಡ ಇರಲಿದೆ ಎಂದು ತಿಳಿಸಿದರು. ಸರ್ಕಾರ ಸಿರಿಧಾನ್ಯ ಬೆಳೆಗಳನ್ನು ಉತ್ತೆಜಿಸಲು ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಹೆಕ್ಟೇರ್‌ಗೆ 6 ಸಾವಿರ ರು. ನೀಡುತ್ತಿದ್ದು, ಕಳೆದ ವರ್ಷ ಸುಮಾರು 302 ರೈತರಿಗೆ ಜಿಲ್ಲೆಯಲ್ಲಿ ಪ್ರೋತ್ಸಾಹಧನ ನೀಡಲಾಗಿದೆ. ಜಿಲ್ಲೆಯಲ್ಲಿ ಜೋಳ, ಸಜ್ಜೆ ಹೆಚ್ಚಾಗಿ ಬೆಳೆಯುತ್ತಿದ್ದು, ಸಾಮೆ, ಕೊರಲೆ, ನವಣೆ ಸೇರಿದಂತೆ ಉಳಿದ ಸಿರಿಧಾನ್ಯಗಳ ಬೆಳೆಯಲು ಕೂಡ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಈ ಬಾರಿ ಕೃಷಿಭಾಗ್ಯ ಯೋಜನೆಯನ್ನು ಮತ್ತೆ ಆರಂಭಿಸಿದೆ. ಕಳೆದ ಕೆಲ ವರ್ಷಗಳಿಂದ ಯೋಜನೆ ಕೈ ಬಿಡಲಾಗಿತ್ತು. ಈಗ ಪುನಾರಂಭಿಸುತ್ತಿದ್ದು, ಜನವರಿಯಿಂದ ಅರ್ಜಿ ಕರೆಯುವ ಸಾಧ್ಯತೆಗಳಿವೆ. ಪ್ರತಿ ತಾಲೂಕಿಗೆ 75 ಕೃಷಿ ಹೊಂಡಗಳನ್ನು ನೀಡುವ ಸಾಧ್ಯತೆಗಳಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಹಾಯಕ ಕೃಷಿ ನಿರ್ದೇಶಕಿ ದೀಪಾ ಕುಲಕರ್ಣಿ, ಅಧಿಕಾರಿ ಸುಧಾ ಇದ್ದರು.