ರಾಜ್ಯ ಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳಕ್ಕೆ ವಿಧ್ಯುಕ್ತ ಚಾಲನೆ

| Published : Sep 24 2024, 01:48 AM IST

ರಾಜ್ಯ ಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳಕ್ಕೆ ವಿಧ್ಯುಕ್ತ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಸೊಗಡಿನ ಜನರ ಬಾಯಿಂದ ಬಾಯಿಗೆ ಸುಲಭವಾಗಿ ತಲುಪಬಹುದಾದ ವಿಶೇಷ ಶಕ್ತಿಯುಳ್ಳ ಜಾನಪದ ಕಲೆಯನ್ನು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ತಮ್ಮ ಪಟ್ಟಾಭಿಷೇಕ ಮಹೋತ್ಸವಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಜೊತೆಗೂಡಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸೋಮವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಜಾನಪದ ಕಲಾವಿದರು ಶ್ರೀಕ್ಷೇತ್ರದಲ್ಲಿ ಸಂಗಮಗೊಂಡು ವಿವಿಧ ಬಗೆಯ ಜಾನಪದ ಪ್ರಕಾರಗಳ ಪ್ರದರ್ಶನ ನೀಡಿದರು.

ನಮ್ಮ ಪೂರ್ವಿಕರ ಬಾಯಿಂದ ಬಾಯಿಗೆ ಜನರಿಂದ ಜನರಿಗೆ ಪಸರಿಸಿದ ಜಾನಪದ ಸೊಗಡಿನ ಕಲೆಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ, ಪಟದ ಕುಣಿತ, ಕೋಲಾಟ ಸೇರಿದಂತೆ ಉತ್ತರ ಕರ್ನಾಟಕದ ಹತ್ತಾರು ಬಗೆಯ ಕಲಾ ಪ್ರದರ್ಶನಗಳು ಕ್ಷೇತ್ರದಲ್ಲಿ ಮೇಳೈಸಿದವು.

ಶ್ರೀಗಳು ಮತ್ತು ಗಣ್ಯರನ್ನು ಸ್ವಾಗತಿಸಿದ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಮಕ್ಕಳು ವಿದ್ಯಾವಂತ, ಬುದ್ಧಿವಂತರಾಗಿ ಜ್ಞಾನವಂತರಾಗಬೇಕೆಂಬ ದೂರದೃಷ್ಟಿಹೊಂದಿದ್ದ ಭೈರವೈಕ್ಯಶ್ರೀಗಳು ವಿದ್ಯಾಕ್ಷೇತ್ರಕ್ಕೆ ಉನ್ನತ ಕೊಡುಗೆ ನೀಡುವ ಜೊತೆಗೆ ಧಾರ್ಮಿಕವಾಗಿ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದೂ ಸೇರಿದಂತೆ ಅಕ್ಷರ ಜ್ಞಾನ, ಅರಣ್ಯ, ಗೋಸಂರಕ್ಷಣೆ, ನಿರ್ಗತಿಕರಿಗೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ ಎಂದರು.

ಗ್ರಾಮೀಣ ಸೊಗಡಿನ ಜನರ ಬಾಯಿಂದ ಬಾಯಿಗೆ ಸುಲಭವಾಗಿ ತಲುಪಬಹುದಾದ ವಿಶೇಷ ಶಕ್ತಿಯುಳ್ಳ ಜಾನಪದ ಕಲೆಯನ್ನು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ತಮ್ಮ ಪಟ್ಟಾಭಿಷೇಕ ಮಹೋತ್ಸವಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಕಳೆದ 44 ವರ್ಷಗಳ ಹಿಂದೆ ಆರಂಭಗೊಂಡ ಈ ಜಾನಪದ ಕಲಾ ಮೇಳವನ್ನು ನಿರಂತರವಾಗಿ ಮುನ್ನಡೆಸುವ ಮೂಲಕ ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮತ್ತು ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಆಶೀರ್ವಚನ ನೀಡಿದರು.

ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ:

ಸಮಾರಂಭದ ವೇದಿಕೆಯಲ್ಲಿ ರಾಮನಗರ ಜಿಲ್ಲೆ ಅಂಕನಹಳ್ಳಿ ಪೂಜಾ ಕುಣಿತ ಕಲಾವಿದ ಶಿವಣ್ಣ ಮತ್ತು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಸೋಬಾನೆ ಚಿಕ್ಕಮ್ಮ ಈ ಇಬ್ಬರು ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಕೊಡಮಾಡುವ ತಲಾ 10 ಸಾವಿರ ಮೊತ್ತದ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಗೌರವಿಸಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಸಹಸ್ರಾರು ಮಂದಿ ಕಲಾವಿದರು ಇದ್ದರು.