ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ದೂರುಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸದೆ ಅನಗತ್ಯ ಕಿರುಕುಳ ನೀಡುತ್ತಿರುವ ಸೆಸ್ಕ್ ಎಂಜಿನಿಯರ್‌ಗಳ ವಿರುದ್ಧ ಶಾಸಕ ಎಚ್.ಟಿ.ಮಂಜು ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿಯಲ್ಲಿ ತಾಲೂಕು ಸೆಸ್ಕ್ ಎಂಜಿನಿಯರ್‌ಗಳ ಸಭೆ ನಡೆಸಿದ ಶಾಸಕರು ಸಭೆಯಲ್ಲಿ ದಾಖಲೆಗಳ ಸಮೇತ ಎಂಜಿಯರ್‌ಗಳ ಕಾರ್ಯಲೋಪವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಈ ಹಿಂದಿನ ಸಭೆಗಳಲ್ಲಿ ಪ್ರಸ್ತಾಪಿತವಾಗಿದ್ದ ಯಾವುದೇ ದೂರುಗಳನ್ನು ಇದುವೆರಗೂ ಪರಿಹರಿಸಿಲ್ಲ. ಈ ಸಾಲಿನಲ್ಲಿ ತಾಲೂಕು ಸೆಸ್ಕ್ ಗೆ 30 ಕೋಟಿ ರು. ಅನುದಾನ ಬಂದಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದ ಕಾರಣ 4 ಕೋಟಿ ಅನುದಾನ ವಾಪಸ್ ಹೋಗುತ್ತಿದೆ ಎಂದು ಕಿಡಿಕಾರಿದರು.ತಾಲೂಕು ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿ ಮಾಡದಿದ್ದರೂ ಮಾಡಲಾಗಿದೆ ಎಂದು ಶಾಸಕರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಇಲಾಖಾ ಸಿಬ್ಬಂದಿ ಮೇಲೆ ಹಲವು ದೂರುಗಳಿದ್ದರೂ ಅದನ್ನು ಸರಿಪಡಿಸುವ ಕನಿಷ್ಠ ಪ್ರಯತ್ನವನ್ನೂ ಎಂಜಿನಿಯರ್‌ಗಳು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರೊಂದಿಗೆ ನಿತ್ಯ ಸಂಪರ್ಕದಲ್ಲಿರುವವನು ನಾನು. ಸಾರ್ವಜನಿಕ ಸೇವಕನಾದ ನನಗೇ ಅನುಪಾಲನ ವರದಿ ತಪ್ಪಾಗಿ ನೀಡಿ ಶಾಸಕರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದೀರಿ ಎಂದು ಶಾಸಕ ಇಲಾಖೆ ಕಾರ್ಯಲೋಪಗಳ ಪಟ್ಟಿಯನ್ನು ಅಧಿಕಾರಿಗಳ ಮುಂದಿಟ್ಟರು.
ತಾಲೂಕಿನ ರೈತರ ಸಮಸ್ಯೆ ಸರಿಪಡಿಸದೆ ಬೇಜವಾಬ್ದಾರಿ ತನ ಪ್ರದರ್ಶನ ಮಾಡುತ್ತೀರಾ. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸೆಸ್ಕ್ ಜೆ.ಇ ಶಿವಶಂಕರ ಮೂರ್ತಿ ತನ್ನ ಮಗನನ್ನು ಗುತ್ತಿಗೆದಾರನನ್ನಾಗಿಸಿಕೊಂಡು ಇಲಾಖೆ ಕಾಮಗಾರಿಗಳನ್ನು ತಾನೇ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕಾಮಗಾರಿಗಳನ್ನು ಗುತ್ತಿಗೆದಾರರಂತೆ ಇಲಾಖೆ ಎಂಜಿನಿಯರುಗಳೇ ಮಾಡುವುದಾದರೆ ನೈಜ ಗುತ್ತಿಗೆದಾರರ ಗತಿಯೇನು ಎಂದು ಪ್ರಶ್ನಿಸಿದರು.
ಸೆಸ್ಕ್ ಸಿಬ್ಬಂದಿ ಕಾರ್ಯಲೋಪ ಒಪ್ಪಿಕೊಂಡ ಸೆಸ್ಕಾಂ ವಿಭಾಗೀಯ ಮುಖ್ಯ ಎಂಜಿನಿಯರ್ ಸುನೀಲ್ ಕುಮಾರ್ ಶಾಸಕರು ಬಯಸಿದರೆ ಕರ್ತವ್ಯ ಲೋಪ ಮಾಡುತ್ತಿರುವ ಎಂಜಿನಿಯರ್ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದರು.ದೂರುದಾರ ರೈತರ ಮೊಬೈಲ್ ನಂಬರ್ ಸಂಗ್ರಹಿಸಿದ ಅವರು, ಅಧಿಕಾರಿಗಳು ರೈತರ ಮುಂದೆ ಲಂಚದ ಬೇಡಿಕೆಯಿಟ್ಟು ಇಲಾಖೆ ಮಾನ ಮರ್ಯಾದೆ ಕಳೆಯಬೇಡಿ. ಇಲಾಖೆಯಲ್ಲಿ ಯಾವುದೇ ಅನುದಾನದ ಸಮಸ್ಯೆಯಿಲ್ಲ. ಶಾಸಕರು ಪ್ರಸ್ತಾಪಿಸಿರುವ ಎಲ್ಲವೂ ಸ್ಥಳೀಯ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ನೀಡುವಂತೆ ಸುನೀಲ್ ಕುಮಾರ್ ಸೂಚಿಸಿದರು.
ಸಭೆಯಲ್ಲಿ ಸೆಸ್ಕ್ ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ, ಎ.ಇ.ಇ ಶಂಕರ್, ಲೆಕ್ಕಾಧಿಕಾರಿ ಮಹೇಶ್ ಚಂದ್ರ ಸೇರಿದಂತೆ ಸೆಸ್ಕ್ ಎಲ್ಲಾ ಸ್ಥಳೀಯ ಎ.ಇ ಮತ್ತು ಜೆ.ಇ ಗಳು ಇದ್ದರು.