ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬರ ಪರಿಸ್ಥಿತಿ ನಿವಾರಣೆಯೊಂದಿಗೆ ರೈತರ ಕೃಷಿ ಮತ್ತು ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಚೆಸ್ಕಾಂ ಸಿಬ್ಬಂದಿ ಮಂಗಳವಾರ ಶ್ರೀಚಾಮುಂಡೇಶ್ವರಿ ವರ್ಧಂತಿ ಉತ್ಸವವನ್ನು ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಪಟ್ಟಣದ ಬೆಸ್ಕಾಂ ಉಪ ವಿಭಾಗದ ಕಚೇರಿ ಆವರಣದಲ್ಲಿ ನಡೆದ ಶ್ರೀಚಾಮುಂಡೇಶ್ವರಿ ವರ್ಧಂತಿ ಉತ್ಸವದಲ್ಲಿ ಇಲಾಖೆ ಅಧಿಕಾರಿಗಳು, ನೌಕರವರ್ಗ, ಲೈನ್ ಮ್ಯಾನ್ ಸಿಬ್ಬಂದಿ ಹಾಗೂ ಗುತ್ತಿಗೆದಾರರುಗಳು ವಿಗ್ರಹ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಿ ಬರ ಪರಿಸ್ಥಿತಿ ಮತ್ತು ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಬೇಡಿಕೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಮಹಿಳಾ ಸಿಬ್ಬಂದಿ ಈ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ಚಂದನ ಮತ್ತು ಅರಿಶಿನ ಕುಂಕುಮ ಲೇಪನದೊಂದಿಗೆ ತುಪ್ಪದಾರತಿ ಬೆಳಗಿದರು. ಪೂಜೆಗೆ ಚಾಲನೆ ನೀಡಿದ ಬೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್.ಶಿವಕುಮಾರ್ ಸಕಾಲದಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ಈ ಸಮಸ್ಯೆ ಇಂಧನ ಇಲಾಖೆಯ ಮೇಲೆ ಸಹ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದರು.ನಮ್ಮನ್ನು ಸಂಕಷ್ಟದಿಂದ ಪಾರು ಮಾಡುವಂತೆ ನಾವು ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವರ್ದಂತಿ ಉತ್ಸವವನ್ನು ಆಚರಿಸುವ ಜೊತೆಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಎಇಇ ಗಳಾದ ಪ್ರದೀಪ್, ಮಹದೇವ್, ಮೋಹನ್, ಲೆಕ್ಕಾಧಿಕಾರಿ ಡಿ.ಸುನೀತಾ, ಅಂತರೀಕ ಲೆಕ್ಕ ಪರಿಶೋಧಕಶಿವಕುಮಾರ್, ಸಹಾಯಕ ಎಂಜಿನಿಯರ್ ಎನ್.ಅನಿತಾ, ಸುವರ್ಣ, ನಾಗೇಶ್, ನೌಕರರ ಸಂಘದ ಅಧ್ಯಕ್ಷ ಮಹದೇವ್, ಪದಾಧಿಕಾರಿಗಳಾದ ಸುರೇಶ್, ಶ್ರೀಧರ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಾನಂದ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.