ವಾರಾಂತ್ಯದ ಒಳಗೆ ಸಿಇಟಿ ಫಲಿತಾಂಶ ಪ್ರಕಟ ಸಾಧ್ಯತೆ

| N/A | Published : May 18 2025, 11:50 PM IST / Updated: May 19 2025, 10:10 AM IST

CBSE Class 10 12 rechecking 2025

ಸಾರಾಂಶ

ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈ ವಾರಾಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ.

 ಬೆಂಗಳೂರು : ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈ ವಾರಾಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ.

ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಮತ್ತು ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅದರಂತೆ ಈಗಾಗಲೇ ಈ ಫಲಿತಾಂಶಗಳು ಪ್ರಕಟವಾಗಿವೆ. ಈ ಫಲಿತಾಂಶ ಪರಿಗಣಿಸಿ ಸಂಬಂಧಿಸಿದ ವಿದ್ಯಾರ್ಥಿಗಳ ಸಿಇಟಿ ರ್‍ಯಾಂಕಿಂಗ್‌ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.

ಈ ಮಧ್ಯೆ, ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಬಳಿಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2 ಬರೆದಿದ್ದ 71 ಸಾವಿರ ವಿದ್ಯಾರ್ಥಿಗಳಲ್ಲಿ 41 ಸಾವಿರ ಮಂದಿ ಫಲಿತಾಂಶ ಉತ್ತಮಗೊಂಡಿದೆ. ಇದರಲ್ಲಿ ಬಹುತೇಕ ಮಂದಿ ವಿಜ್ಞಾನ ವಿಭಾಗದವರಾಗಿದ್ದು, ಅವರ ಉತ್ತಮಗೊಂಡಿರುವ ಫಲಿತಾಂಶವನ್ನು ಸಿಇಟಿ ರ್‍ಯಾಂಕಿಂಗ್‌ಗೆ ಈಗ ಪರಿಗಣಿಸಬೇಕಿದೆ.

 ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದಿರುವ ಅಂಕಗಳಲ್ಲಿ ತಲಾ ಶೇ.50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಉತ್ತಮಗೊಂಡಿರುವ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಬೇಕಿದೆ. ಒಟ್ಟಾರೆ ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಈ ವಾರಾಂತ್ಯದೊಳಗೆ ಫಲಿತಾಂಶ ಪ್ರಕಟಿಸುವ ಪ್ರಯತ್ನದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿದ್ದಾರೆ. 

ಏ.16 ಮತ್ತು 17ರಂದು ಈ ಬಾರಿಯ ಸಿಇಟಿ ಪರೀಕ್ಷೆಗಳನ್ನು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 3.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.15ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. 1,958 ಅಭ್ಯರ್ಥಿಗಳು ಹಾಜರಾಗಿದ್ದರು.

Read more Articles on