ಚ.ಸರ್ವಮಂಗಳಾ ಅವರ ಬರಹ, ಬೋಧನೆಯಲ್ಲಿ ವಿಮರ್ಶಾತ್ಮಕ ದೃಷ್ಟಿ ಇದೆ: ಡಾ.ಬಸವರಾಜು ಕಲ್ಗುಡಿ

| Published : Mar 22 2024, 01:01 AM IST

ಚ.ಸರ್ವಮಂಗಳಾ ಅವರ ಬರಹ, ಬೋಧನೆಯಲ್ಲಿ ವಿಮರ್ಶಾತ್ಮಕ ದೃಷ್ಟಿ ಇದೆ: ಡಾ.ಬಸವರಾಜು ಕಲ್ಗುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಮಂಗಳಾ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು- ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದರು. ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಣಮುಂದೆ ನಿಲ್ಲಿಸುವಂಥಹ ಬೋಧಕರಾಗಿದ್ದರು. ಅವರ ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರ ನೆನಪು ಅಮರ.

ಕನ್ನಡಪ್ರಭ ವಾರ್ತೆ ಮೈಸೂರು

ಚ.ಸರ್ವಮಂಗಳಾ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು-ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿರುವುದಾಗಿ ಕವಿ ಡಾ. ಬಸವರಾಜು ಕಲ್ಗುಡಿ ಹೇಳಿದರು.

ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮೈಸೂರಿನ ಕನ್ನಡ ಲೇಖಕಿಯರ ಟ್ರಸ್ಟ್ ಮತ್ತು ಜಿಲ್ಲಾ ಕಸಾಪ ಸಹಯೋಗದಲ್ಲಿ ಗುರುವಾರ ಅಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಚ. ಸರ್ವಮಂಗಳಾ ಅವರ ‘ಅಮ್ಮನಗುಡ್ಡ-ಅಂತರಾಳ’ ಕುರಿತು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ವಮಂಗಳಾ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು- ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದರು. ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಣಮುಂದೆ ನಿಲ್ಲಿಸುವಂಥಹ ಬೋಧಕರಾಗಿದ್ದರು. ಅವರ ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರ ನೆನಪು ಅಮರ ಎಂದು ಸ್ಮರಿಸಿದರು.

ಕತೆಗಾರ ಡಾ. ಮೊಗಳ್ಳಿ ಗಣೇಶ್ ಅವರು ಲಂಕೇಶ್ ಪತ್ರಿಕೆಗಾಗಿ ಚ. ಸರ್ವಮಂಗಳಾ ಅವರ ಸಂದರ್ಶನದಲ್ಲಿ ಹೆಣ್ಣಿನ ಬಗ್ಗೆ ಅಭಿಪ್ರಾಯ ಕೇಳಿದಾಗ ಹೆಣ್ಣಿಗೆ ಅವಳ ದೇಹವೇ ದೊಡ್ಡ ತಡೆಯಾಗಿದೆ. ಹೆಣ್ಣನ್ನು ಮಾನದ ಮಡಕೆಯಲ್ಲಿ ಬಂಧಿಸುವಂತಹ ಕ್ರೂರತೆ ಬೇರೆ ಯಾವುದಿದೆ ಎಂದು ಪ್ರಶ್ನಿಸುತ್ತಾರೆ. ಹೀಗೆ ನೇರವಾಗಿ, ದಿಟ್ಟವಾಗಿ ಮಾತನಾಡುತ್ತಿದ್ದ ಮಂಗಳಾ ಅವರಿಗೆ ‘ಕಾಡುವ ಲೇಖಕ’ನಾಗಿ ಪಿ. ಲಂಕೇಶ್ ಇದ್ದರೆ, ಅನಂತಮೂರ್ತಿ ಅವರು ಸ್ನೇಹಿತರಾಗಿದ್ದರಂತೆ. ತನ್ನೆಲ್ಲ ಕಷ್ಟ ಸುಖವನ್ನೂ ಮಹಾರಾಜ ಕಾಲೇಜಿನಲ್ಲಿದ್ದ ಸಹಪಾಠಿ ಗೆಳತಿ ಕಾವೇರಿ ಅವರಲ್ಲಿ ಹಂಚಿಕೊಳ್ಳುತ್ತಿದ್ದರಂತೆ ಎಂದು ಅವರು ಹೇಳಿದರು.

ಸರ್ವಮಂಗಳಾ ಅವರ ಇತರ ಕೆಲವು ಕವಿತೆಗಳೊಂದಿಗೆ ಅಮ್ಮನ ಗುಡ್ಡಕ್ಕೂ ಅಕ್ಷರ ಹೊಸ ಕಾವ್ಯದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಏಕೆಂದರೆ ಆ ಅಂತರದಲ್ಲಿ ಸರ್ವಮಂಗಳ ಕನ್ನಡದ ಒಬ್ಬ ಪ್ರಮುಖ ಕವಿಯಾಗಿ ಗುರುತಿಸಿಕೊಂಡಿದ್ದ ಮಹಿಳೆ ಎಂದರು.

ಕೃತಿಯನ್ನು ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಪಕಿ ಡಾ.ಎಸ್.ಡಿ. ಶಶಿಕಲಾ ಮಾತನಾಡಿ, ಒಂದು ದೃಷ್ಟಿಯಿಂದ ನೋಡಿದರೆ ಇದರಲ್ಲಿ ಕವಿತೆಯಿಂದ ಸಾಮಾನ್ಯರು ನಿರೀಕ್ಷಿಸುವಂಥದು ಏನೂ ಇಲ್ಲ. ಆಕರ್ಷಿಸುವ ಪದಪ್ರಯೋಗಗಳಾಗಲಿ, ಇಮೇಜರಿಯಾಗಲಿ, ಸಂದೇಶವಾಗಲಿ ಧ್ವನಿಗಳಾಗಲಿ ಕಾಣಿಸುವುದಿಲ್ಲ. ದಟ್ಟವಾದ ವಸ್ತುವಿವರಗಳೇನೋ ಇವೆ. ಆದರೆ ಅವುಗಳನ್ನು ಕವಿತೆಯಾಗಿಸುವ ಪರಿಭಾಷೆ ಇಲ್ಲ. ನನ್ನನ್ನು ಕೇಳಿದರೆ ಈ ಅಕವಿತತ್ವವೇ ಅಮ್ಮನ ಗುಡ್ಡದ ಒಂದು ವೈಶಿಷ್ಟ್ಯ ಹಾಗೂ ಎಲ್ಲ ಕಾಲದಲ್ಲೂ ನಡೆಯುವ, ಈಗಲೂ ನಡೆಯುತ್ತಿರುವ ಸಾಂಸ್ಕೃತಿಕ ಬದಲಾವಣೆ ಎಂದರು.

ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಎಚ್.ಎಂ ಕಲಾಶ್ರೀ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಚ. ಸರ್ವಮಂಗಳಾ, ಕನ್ನಡ ಲೇಖಕಿಯರ ಟ್ರಸ್ಟ್ ಅಧ್ಯಕ್ಷೆ ಪ್ರೊ. ಪದ್ಮಾಶೇಖರ್, ಕಾರ್ಯದರ್ಶಿ ಹೇಮಾ ನಂದೀಶ್, ಸಹ ಕಾರ್ಯದರ್ಶಿ ಮೀನಾ ಮೈಸೂರು, ಸಾಹಿತಿ ಸತೀಶ್ ಜವರೇಗೌಡ, ರಂಗಕರ್ಮಿ ಚಂದ್ರ ಮಂಡ್ಯ ಹಾಗೂ ಸದಸ್ಯರು ಇದ್ದರು.