ಕೊಡುವಾಗ ದೊರೆಯುವ ಸುಖವು ಪಡೆಯುವುದಕ್ಕಿಂತ ಮಿಗಿಲು

| Published : Jul 30 2024, 12:31 AM IST

ಸಾರಾಂಶ

ಕೊಡುವಾಗ ದೊರೆಯುವ ಸುಖವು ಪಡೆಯುವುದಕ್ಕಿಂತ ಮಿಗಿಲಾಗಿರುತ್ತದೆ. ಹಣದಿಂದ ಆ ಸಂತೋಷ ಪಡೆಯುವುದು ಅಸಾಧ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಕೊಡುವಾಗ ದೊರೆಯುವ ಸುಖವು ಪಡೆಯುವುದಕ್ಕಿಂತ ಮಿಗಿಲಾಗಿರುತ್ತದೆ. ಹಣದಿಂದ ಆ ಸಂತೋಷ ಪಡೆಯುವುದು ಅಸಾಧ್ಯ. ಪ್ರೀತಿಯ ಅಂತಕರಣದಿಂದ ಮಾತ್ರವೇ ಅದು ಸಾಧ್ಯ ಎಂದು ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷ ಡಾ. ಗುರುರಾಜ್ ಕರಜಗಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯವು ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಉಪನ್ಯಾಸದಲ್ಲಿ ಕೊಡುವುದರಲ್ಲಿನ ಆನಂದ ಕುರಿತು ಮಾತನಾಡಿದ ಅವರು, ನಾವು ಜೀವನದ ಉದ್ದಕ್ಕೂ ಬೇಡುವುದರಲ್ಲೇ ಕಳೆಯುತ್ತೇವೆ. ಆದರೆ, ಕೊಡುವುದರಲ್ಲಿನ ಸುಖ ನಮ್ಮ ಹೆಸರನ್ನು ಶಾಶ್ವತವಾಗಿ ಉಳಿಸುತ್ತದೆ ಎಂದರು.

ಇನ್ನೊಬ್ಬರನ್ನು ಭೇಟಿಯಾದಾಗ ಕೊಡುವ ನಗು ನಮ್ಮ ಸಂಬಂಧ ಗಟ್ಟಿಗೊಳಿಸುವುದರೊಂದಿಗೆ ಆರೋಗ್ಯಕ್ಕೂ ಸಹಕಾರಿ. ಮಗುವಿನೊಳಗೆ ಕಲ್ಪನಾತೀತ ಶಕ್ತಿಯಿದೆ. ಮೇಷ್ಟ್ರು ನೀಡುವ ಉತ್ತೇಜನದ ಮಾತು ಆ ವಿದ್ಯಾರ್ಥಿಯ ಬದುಕಿನ ಮಹತ್ವದ ಬದಲಾವಣೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.

ನಿಸರ್ಗ ಕೊಟ್ಟಿದ್ದನ್ನು ಎಂದೂ ಹೇಳಿಕೊಂಡಿಲ್ಲ. ಆದರೆ, ಮಾನವ ಟ್ಯೂಬ್ ಲೈಟ್ ಕೊಡುಗೆಯಾಗಿ ನೀಡಿದರೂ ಅದರ ಸುತ್ತೆಲ್ಲಾ ತನ್ನ ಹೆಸರು ಬರೆಸಿರುತ್ತಾನೆ. ಶಿಕ್ಷಣ, ಉದ್ಯೋಗ, ಪ್ರೀತಿ ಪಡೆದುಕೊಂಡು ಜೀವನ ದೊಡ್ಡದಾಗಿದೆ. ಅದನ್ನು ಇತರರಿಗೂ ಹಂಚಿದಾಗ ಜೀವನ ಮತ್ತಷ್ಟು ಭದ್ರವಾಗುತ್ತದೆ. ಕೊಡುವುದು ಅಮೃತ ತತ್ವ, ಕೊಡದೇ ಇರುವುದು ರಾಕ್ಷಸ ತತ್ವ ಎಂದರು.

ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ದೂರುತ್ತೇವೆ. ಆದರೆ, ಅವರಿಗೆ ನಾವೆಷ್ಟು ಪ್ರೀತಿ ನೀಡಿದ್ದೇವೆ ಎಂಬುದನ್ನು ಮರೆಯುತ್ತೇವೆ. ಜೀವನದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಬದಲು ಮಕ್ಕಳಿಗಾಗಿ ಭಾವನಾತ್ಮಕ ಖಾತೆ ಆರಂಭಿಸಿ, ಅವರಲ್ಲಿ ಪ್ರೀತಿಯನ್ನು ಹೂಡಿಕೆ ಮಾಡಿ. ನಮಗೆ ಅದನ್ನು ಬಡ್ಡಿ ಸಮೇತ ಮರಳಿಸುತ್ತಾರೆ. ಸಾವು ನಿರೀಕ್ಷಿತ. ಹೀಗಾಗಿ, ಬದುಕಿದ್ದ ಕಾಲದಲ್ಲಿ ಹೆಜ್ಜೆ ಗುರುತು ಮೂಡಿಸಿ ಎಂದು ಅವರು ಸಲಹೆ ನೀಡಿದರು.

ದೇವಸ್ಥಾನವನ್ನು ಹಣ ನೀಡಿ ಕಟ್ಟಿಸಬಹುದು. ಆದರೆ ಅಲ್ಲಿ ಶಿಲ್ಪಿ, ಅರ್ಚಕ ಮತ್ತಿತರರು ಪ್ರಾಮಾಣಿಕ ಸೇವೆ ನೀಡಿದಾಗ ಮಾತ್ರವೇ ಅದು ದೇವಾಲಯವಾಗಿ ಬೆಳಗುತ್ತದೆ. ಕೊಡುವುದಕ್ಕೆ ಅನೇಕ ಸ್ವರೂಪಗಳಿವೆ. ಆದರೆ, ಅವು ಇಂದು ವ್ಯವಹಾರವಾಗಿಯಷ್ಟೇ ಉಳಿದಿದೆ ಎಂದರು.

ನಮಗೆ ಕುಟುಂಬಕ್ಕಾಗಿ ಶ್ರಮಿಸಿದ್ದ ಮುತ್ತಾತಂದಿರ ಹೆಸರು ನೆನಪಿರುವುದಿಲ್ಲ. ಆದರೆ, ಸಮಾಜಕ್ಕಾಗಿ ಅರ್ಪಿಸಿಕೊಂಡ ದಾರ್ಶನಿಕರ ಪರಿಚಯವಿದೆ. ನಮಗಾಗಿ ಶ್ರಮಿಸಿದವರಿಗಿಂತ, ಜಗತ್ತಿಗಾಗಿ ದುಡಿದವರು ಸ್ಮರಣೀಯರಾಗಿರುತ್ತಾರೆ ಎಂಬುದರ ತಾತ್ಪರ್ಯವನ್ನು ಅರಿಯಬೇಕು ಎಂದು ಅವರು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ ಇದ್ದರು.