ಕಟಾಚಾರಕ್ಕೆ ಬಂದು ಹೋದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

| Published : Aug 14 2024, 12:47 AM IST

ಕಟಾಚಾರಕ್ಕೆ ಬಂದು ಹೋದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡಪರ ಸಂಘಟನೆಗಳೊಂದಿಗೆ ನಡೆಸಿದ ಸಮಾಲೋಚನ ಸಭೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಹಾಜರಾಗಿರುವುದು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಪಕ್ಕದಲ್ಲಿ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳ ಸೀಮೆಗೆ ಅಂಟಿಕೊಂಡಿರುವ ರಾಯಚೂರು ಜಿಲ್ಲೆ ತೆಲುಗು ಪ್ರಭಾವಕ್ಕೆ ನಲುಗಿದ ನೆಲೆಯಲ್ಲಿ ಕನ್ನಡ ಬಳಕೆ ವಾಸ್ತವದ ಸ್ಥಿತಿ-ಗತಿ, ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಹೊಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾರುವ ಭೇಟಿ (ಪ್ಲೈಯಿಂಗ್‌ ವಿಸಿಟ್‌) ಕೊಟ್ಟು ಹೋಗಿರುವುದು ಇದೀಗ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ನಗರ ಪ್ರವಾಸ ಕೈಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಾಟಾಚಾರಕ್ಕೆ ಬಂದು ಹೋಗಿದ್ದಾರೆ ಎನ್ನುವ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರ ಪ್ರವೇಶ ನೀಡದೇ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅಧ್ಯಕ್ಷರು, ನಂತರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬೇಕಾಬಿಟ್ಟಿ ಸಮಾಲೋಚನಾ ಸಭೆ ಕೈಗೊಂಡು ಮರಳಿದ್ದು, ಇದು ಕನ್ನಡಪರ ಸಂಘಟನೆಗಳ ಕಣ್ಣುಕೆಂಪಾಗಿಸಿದೆ.

ಕನ್ನಡ ದುಸ್ಥಿತಿ:

ಜಿಲ್ಲೆಯಲ್ಲಿ ಕನ್ನಡ ಬಳಕೆಯ ಸನ್ನಿವೇಶವು ದುಸ್ಥಿತಿಯಲ್ಲಿದೆ ಎಂದರೆ ತಪ್ಪಾಗಲಾರದು, ಸರ್ಕಾರಿ-ಖಾಸಗಿ ಕಚೇರಿಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿ-ತೆಲುಗು ಬಳಕೆ ಮಾಡುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇನ್ನು ನಿವಾಸಿಗಳ ನಿತ್ಯದ ಚಟುವಟಕೆಗಳು, ವ್ಯಾಪಾರ-ವಹಿವಾಟಿನಲ್ಲಿಯೂ ಕನ್ನಡಕ್ಕಿಂತ ಒಂದು ಕೈ ಹೆಚ್ಚಾಗಿಯೇ ಹಿಂದಿ-ತೆಲುಗು ಮಾತನಾಡುತ್ತಿದ್ದು, ನಾಮಫಲಕಗಳಲ್ಲಿಯೂ ಸಹ ಕನ್ನಡ ಅಪರೂಪವೆನ್ನುವಂತಾಗಿದೆ. ಸ್ಥಳೀಯ ಮಟ್ಟದಲ್ಲಿ ಕನ್ನಡ ಬಳಕೆ ಮೇಲೆ ನಿಗಾ ವಹಿಸುವ ಜವಾಬ್ದಾರಿ ಹೊಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಚಟುವಟಿಕೆಗಳು ಡಿಸಿ ಕಚೇರಿ, ರಂಗಮಂದಿರಕ್ಕೆ ಸೀಮಿತಗೊಂಡಿವೆ. ಗಡಿಭಾಗದಲ್ಲಿರುವ ಕನ್ನಡ ಶಾಲೆಗಳ ದುಸ್ಥಿತಿಯಂತೂ ಹೇಳತೀರದು. ಹೀಗೆ ಜಿಲ್ಲೆಯಲ್ಲಿ ಕನ್ನಡ ಬಳಕೆಯು ಬೆಟ್ಟದಷ್ಟು ಸವಾಲುಗಳ ಸುಳಿಯಲ್ಲಿ ಸಿಲುಕಿರುವ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಜಿಲ್ಲಾ ಪ್ರವಾಸ ಕೈಗೊಂಡು ಕಟಾಚಾರದ ಸಭೆ, ಸಮಾಲೋಚನೆಗಳನ್ನು ನಡೆಸಿ ಹೋಗಿರುವುದು ಕನ್ನಡ ಪ್ರೇಮಿಗಳಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.

ಮುಜುಗರ ಸನ್ನಿವೇಶ:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕನ್ನಡಪರ ಸಂಘಟನೆಗಳೊಂದಿಗ ಸಮಾಲೋಚನೆ ಸಭೆ ನಡೆಸಿದರು. ಈ ವೇಳೆ ಕೇವಲ ಬೆರಳೆಣಿಕೆಯಷ್ಟು ಜನರು ಸಭೆಗೆ ಹಾಜರಾಗಿರುವುದನ್ನು ಕಂಡು ಕಂಗಾಲಾದರು. ರಾಜ್ಯ ಮಟ್ಟದ ಪ್ರಾಧಿಕಾರದ ಅಧ್ಯಕ್ಷರು ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸಭೆ ಆಯೋಜಿಸಿದರೆ ಕೆಲವೇ ಕೆಲವೇ ಜನರು ಪಾಲ್ಗೊಂಡಿರುವುದು ಸಾಕಷ್ಟು ಮುಜುಗರಕ್ಕೀಡು ಮಾಡಿತು