ಸಾರಾಂಶ
ಚಳ್ಳಕೆರೆ ನಗರದ ಖಾಸಗಿ ಬಸ್ಟಾಂಡ್‌ನಲ್ಲಿ ನಿರ್ಮಾಣವಾಗಲಿರುವ ಶೌಚಾಲಯ ಕಟ್ಟಡದ ಜಾಗವನ್ನು ಶಾಸಕ ಟಿ.ರಘುಮೂರ್ತಿ ವೀಕ್ಷಿಸಿದರು.
ಸಾರ್ವಜನಿಕ ಶೌಚಾಲಯ ನಿರ್ಮಾಣ ಜಾಗ ಪರಿಶೀಲಿಸಿದ ಶಾಸಕ ಟಿ.ರಘುಮೂರ್ತಿ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರದ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದ್ದು, ಕಳೆದ ಕೆಲವು ತಿಂಗಳಿಂದ ತಟಸ್ಥಗೊಂಡಿದ್ದ ಕಾಮಗಾರಿಗಳನ್ನು ಪುನರ್ ಆರಂಭಿಸಲಾಗಿದೆ. ಸಾರ್ವಜನಿಕ ಒತ್ತಾಯದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಡಿವೈಎಸ್‌ಪಿ ಕಚೇರಿ ಮತ್ತು ಇಂದಿರಾ ಕ್ಯಾಂಟಿನ್ ಬಳಿ ಸುಮಾರು 63 ಲಕ್ಷ ವೆಚ್ಚದಲ್ಲಿ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಶುಕ್ರವಾರ ಸಂಜೆ ನಗರದ ಖಾಸಗಿ ಬಸ್ಟಾಂಡ್‌ಗೆ ಭೇಟಿ ನೀಡಿ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಾಹತಾಕಾಂಕ್ಷೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಜಾಗವನ್ನು ಪರಿಶೀಲನೆ ನಡೆಸಿದರು. ಅಲ್ಲಿಂದ ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಯಿತು.
ಡಿವೈಎಸ್‌ಪಿ ಕಚೇರಿ ಮುಂಭಾಗದಲ್ಲಿ ಸುಮಾರು 18 ಲಕ್ಷ ವೆಚ್ಚದಲ್ಲಿ ಹೈಟೇಕ್ ಶೌಚಾಲಯ, ಇಂದಿರಾಕ್ಯಾಂಟಿನ್ ಪಕ್ಕದಲ್ಲಿ ಹಾಲುಣಿಸುವ ಮಹಿಳೆಯರು ಮತ್ತು ಮಹಿಳೆಯರ ವಿಶ್ರಾಂತಿಗಾಗಿ ಸುಮಾರು 15 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವಿನಯ್, ನೈರ್ಮಲ್ಯ ಎಂಜಿನಿಯರ್ ನರೇಂದ್ರಬಾಬು, ಚೇತನ್, ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್ ಮುಂತಾದವರು ಉಪಸ್ಥಿತರಿದ್ದರು.