ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ಮಳೆ ಇಲ್ಲದೇ ಎಲ್ಲಾ ಜಮೀನಿಗಳಲ್ಲಿರುವ ಬಿತ್ತನೆ ಮಾಡಿದ ಶೇಂಗಾ ಬೆಳೆ ಒಣಗಲು ಪ್ರಾರಂಭಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಶಾಸಕ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ವಾಸ್ತಾಂಶವನ್ನು ಅರಿಯಲು ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಹರಿನಗರದ ರಿ.ಸರ್ವೆ ನಂ 39ರ ಜಮೀನಲ್ಲಿರುವ ಒಣಗಿದ ಶೇಂಗಾ ಬೆಳೆಯನ್ನು ವೀಕ್ಷಿಸಿದರು.ಜಮೀನಿನ ರೈತ ಪ್ರಕಾಶ್, ಮಂಜುನಾಥ ಮಾತನಾಡಿ, ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಶೇಂಗಾ ಬಿತ್ತನೆ ಮಾಡಿದ್ದೆ. ಕಳೆದ ಸುಮಾರು 20 ದಿನಗಳಿಂದ ನಿರಂತರವಾಗಿ ಮಳೆ ಕೈಕೊಟ್ಟ ಹಿನ್ನೆಲೆ ಜಮೀನಿನಲ್ಲಿದ್ದ ಶೇಂಗಾ ಬೆಳೆ ಒಣಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೋವನ್ನು ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.
ರೈತನ ಮನವಿಗೆ ಸಕರಾತ್ಮಕವಾಗಿ ಉತ್ತರಿಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ನಿಮ್ಮ ಜಮೀನು ಸೇರಿದಂತೆ ಈ ಭಾಗದ ಹಲವಾರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಎಲ್ಲೆಡೆ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ಣಪ್ರಮಾಣದಲ್ಲಿ ಬೆಳೆ ವಿಮೆಯನ್ನು ಪಾವತಿಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಭರವಸೆ ನೀಡಿದರು.ಶಾಸಕ ಟಿ. ರಘುಮೂರ್ತಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಚಳ್ಳಕೆರೆ ತಾಲೂಕಿನ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ಒಣಗಿ ನೆಲಕಚ್ಚಿವೆ. ರೈತರು ಬೆಳೆವಿಮೆ ಮಾಡಿಸಿದ್ದು, ಕೆಲವೊಮ್ಮೆ ದಾಖಲಾತಿಗಳ ಸಲ್ಲಿಕೆ ವಿಳಂಬ ನೆಪವೊಡ್ಡಿ ರೈತರಿಗೆ ಬೆಳೆಪರಿಹಾರವನ್ನು ನೀಡಲಾಗುತ್ತಿಲ್ಲ, ಪರಿಹಾರದಿಂದ ರೈತರು ವಂಚಿತರಾಗುತ್ತಾರೆ ಎಂದು ತಿಳಿಸಿದರು.
ಸಾವಿರಾರು ರೈತರು ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳಾದ ತಾವು ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಿ ಯಾವುದೇ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದರು.ತಹಸೀಲ್ದಾರ್ ರೇಹಾನ್‌ಪಾಷ, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ರಘುನಾಥಸಿಂಗ್, ಗ್ರಾಮ ಪಂಚಾಯಿತಿ ಸದಸ್ಯ ಎನ್. ಮಂಜುನಾಥ, ನಾಗರಾಜು, ಡಿವೈಎಸ್ಪಿ ಟಿ.ಬಿ. ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.