ಸಾರಾಂಶ
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಆರಂಭದಲ್ಲಿ ಇದ್ದ ಆಸಕ್ತಿ, ಸ್ಪರ್ಧಾ ಮನೋಭಾವ ಇವೆಲ್ಲವೂ ಕಾಲಕ್ರಮೇಣ ಕಡಿಮೆ ಆಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲಾ ಕ್ಷೇತ್ರದಲ್ಲೂ ಆರೋಗ್ಯಕರ ಸ್ಪರ್ಧೆ ನಡೆಸಬೇಕಿದೆ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ ಎಂದು ಒಕ್ಕಲಿಗ ಯುವ ಬ್ರಿಗೇಡಿನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದರು.ನಗರದ ಜಯಲಕ್ಷ್ಮೀಪುರಂ ನ ಎಸ್.ಬಿ.ಬಿ.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ 04 ಬಿ ಕಂಪನಿ 14 ಕರ್ನಾಟಕ ಬೆಟಾಲಿಯನ್ ಎನ್.ಸಿಸಿ, 01/4 ಕರ್ನಾಟಕ ಏರ್ ಸ್ಕ್ವಾಡ್ರ್ಯನ್ ಎನ್.ಸಿ.ಸಿ ಮೈಸೂರು ಜಂಟಿಯಾಗಿ ಆಯೋಜಿಸಿದ್ದ ಯುಪಿಎಸ್ಸಿ, ಸಿಡಿಎಸ್, ಎನ್ ಡಿಎ ಪರೀಕ್ಷಾ ಆಕಾಂಕ್ಷಿಗಳಿಗೆ ಹಾಗೂ ಎಸ್.ಎಸ್.ಬಿ ಸಂದರ್ಶನ ಪ್ರಕ್ರಿಯೆಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಆರಂಭದಲ್ಲಿ ಇದ್ದ ಆಸಕ್ತಿ, ಸ್ಪರ್ಧಾ ಮನೋಭಾವ ಇವೆಲ್ಲವೂ ಕಾಲಕ್ರಮೇಣ ಕಡಿಮೆ ಆಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಕಲಿಕಾ ವಾತಾವರಣ ಕೊರತೆ, ನಿತ್ಯಜೀವನದ ಅಡೆತಡೆಗಳು, ಸೂಕ್ತ ಮಾಹಿತಿ ಕೊರತೆ, ವಿಷಯ ಕ್ರೋಢೀಕರಣಕ್ಕೆ ಸಮಯದ ಅಭಾವ, ಸಿದ್ಧತೆಗೆ ಯೋಜನೆ ಇಲ್ಲದಿರುವಿಕೆ ಹಾಗೂ ಬಹುಮುಖ್ಯವಾಗಿ ಪ್ರಶ್ನೆಯ ವಿಧ ಹಾಗೂ ಅವುಗಳನ್ನು ಬಿಡಿಸುವ ವಿಧಾನ ತಿಳಿಯದೇ ಇರುವುದು ಕಾರಣ. ಜೀವನದಲ್ಲಿ ಯಶಸ್ವಿಯಾಗ ಬೇಕಾದರೆ ಪ್ರತಿ ಹಂತದಲ್ಲೂ ಅಧ್ಯಯನ ಯೋಜನೆ ಮತ್ತು ಕಾರ್ಯತಂತ್ರ ಅಳವಡಿಸಕೊಳ್ಳಬೇಕು ಎಂದು ಅವರು ತಿಳಿಸಿದರು.ನಿವೃತ ಗ್ರೂಪ್ ಕ್ಯಾಪ್ಟನ್ ಅಭಿನವ್ ಚತುರ್ವೇದಿ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂಯೋಜಿತ ರಕ್ಷಣಾ ಸಿಬ್ಬಂದಿ ಪರೀಕ್ಷೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ, ಆಫ್ ಕ್ಯಾಟ್ ಪರೀಕ್ಷೆ ಮತ್ತು ಅಗ್ನಿವಿರ್ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಲ್ ಎಸ್.ಜೆ.ಎಸ್. ಸಂದಾರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕಾಲೇಜಿನ ಸಿಇಒ ಡಾ. ರಮೇಶ್, ಎನ್.ಸಿ.ಸಿ ಫ್ಲೈಯಿಂಗ್ ಆಫೀಸರ್ ಡಾ. ಪುಷ್ಪರಾಣಿ, ಎನ್.ಸಿ.ಸಿ ಅಧಿಕಾರಿ ಡಾ. ಗಾಯತ್ರಿ, ಕಾರ್ಯಕ್ರಮದ ಆಯೋಜಕ ಮಣಿಕಂಠ ಇದ್ದರು.