ಸಭೆ ನಡವಳಿಯಂತೆ ಜಿ 3 ಮಾದರಿಯ (1704) ಗುಂಪು ಮನೆ ನಿರ್ಮಿಸಲು ಪರಿಷ್ಕೃತ ಡಿ.ಪಿ.ಆರ್. ಸಿದ್ಧಪಡಿಸಲು ತಿಳಿಸಲಾಗಿದ್ದು, ಕಳೆದ ಸಭೆ ನಡೆದು 13 ತಿಂಗಳಾಗಿದ್ದು, ಇನ್ನು ಯಾವುದೇ ಕ್ರಮವಹಿಸದಿರುವ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಕನ್ನಡಪ್ರಭ ವಾರ್ತೆ ಮೈಸೂರು
ಚಾಮರಾಜ ಕ್ಷೇತ್ರದ ಆಶ್ರಯ ಯೋಜನೆಗಾಗಿ ತಾಲೂಕಿನ ಹಂಚ್ಯಾ ಗ್ರಾಮದ ಸರ್ವೇ ನಂ. 65ರ 24.09 ಎಕರೆ ಜಮೀನಿನ ಪೈಕಿ 23 ಎಕರೆ ಜಮೀನನ್ನು ಚಾಮರಾಜ ಕ್ಷೇತ್ರದ ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ನಗರ ಪಾಲಿಕೆಯ ನವೀಕೃತ ಸಭಾಂಗಣದಲ್ಲಿ ಶಾಸಕ ಕೆ.ಹರೀಶ್ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ನಡವಳಿಯಂತೆ ಜಿ+3 ಮಾದರಿಯ (1704) ಗುಂಪು ಮನೆಗಳನ್ನು ನಿರ್ಮಿಸಲು ಪರಿಷ್ಕೃತ ಡಿ.ಪಿ.ಆರ್. ಸಿದ್ಧಪಡಿಸಲು ತಿಳಿಸಲಾಗಿದ್ದು, ಕಳೆದ ಸಭೆ ನಡೆದು 13 ತಿಂಗಳಾಗಿದ್ದು, ಇನ್ನು ಯಾವುದೇ ಕ್ರಮವಹಿಸದಿರುವ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಡಿ.31ರೊಳಗೆ ಡಿ.ಪಿ.ಆರ್.ಪೂರ್ಣಗೊಳಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರು ನಿಗಧಿಪಡಿಸಿರುವ ದಿನಾಂಕದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರ ಗಮನಕ್ಕೆ ತಂದರು.ಬಂಡಿಪಾಳ್ಯ ಸರ್ವೇ ನಂಬರ್ 7 ರಲ್ಲಿ ಲಭ್ಯವಿರುವ 6 ಎಕರೆ ಸರ್ಕಾರಿ ಜಮೀನನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಯೋಜನೆಯಡಿ ಮಂಜೂರು ಮಾಡಿ ಹಸ್ತಾಂತರಿಸಲು ವಿಳಂಬವಾಗುತ್ತಿರುವ ಬಗ್ಗೆ ತಹಸೀಲ್ದಾರ್ ಅವರನ್ನು ಕೇಳಿದಾಗ ಕಂದಾಯ ದಾಖಲೆಗಳನ್ನು ಈಗಾಗಲೇ ಸರಿಪಡಿಸಿದ್ದು, ಇನ್ನು 2 ದಿನಗಳಲ್ಲಿ ನಗರ ಪಾಲಿಕೆಗೆ ಬಂಡಿಪಾಳ್ಯ ಸ.ನಂ. 76.28 ಎಕರೆ ಜಾಗವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಿ, ನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದು ನಗರ ಪಾಲಿಕೆ ಗಮನಕ್ಕೆ ತಂದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಅಗತ್ಯ ಕ್ರಮವಹಿಸಿ ವಿಳಂಬಕ್ಕೆ ಆಸ್ಪದ ನೀಡದೆ ಕೂಡಲೇ ಹಸ್ತಾಂತಕ್ಕೆ ಕ್ರಮವಹಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.ಕ್ಷೇತ್ರದ ಆಶ್ರಯ ವಸತಿ ಯೋಜನೆಗಾಗಿ ಹೆಬ್ಬಾಳು ಸ.ನಂ.201 ಹಾಗೂ ಶ್ರೀರಾಂಪುರ ಸ.ನಂ. 181 ರಲ್ಲಿ ಲಭ್ಯವಿರುವ ಜಮೀನನ್ನು ಕೂಡ ಅಳತೆ ಕಾರ್ಯ ಮಾಡಿಸಿ, ನಕ್ಷೆ ಹಾಗೂ ಅಗತ್ಯ ಕಂದಾಯ ದಾಖಲೆಗಳಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಯೋಜನೆಗಾಗಿ ಎಂದು ಕಾಯ್ದಿರಿಸಿ, ಈ ತಿಂಗಳ ಅಂತ್ಯದೊಳಗೆ ಹಸ್ತಾಂತರಿಸಲು ತಹಸೀಲ್ದಾರ್,ಮೈಸೂರು ತಾಲೂಕು ಹಾಗೂ ಭೂ-ದಾಖಲೆಗಳ ಸಹಾಯಕ ನಿರ್ದೇಶಕರು, ಸಿಟಿ ಸರ್ವೇ ಅವರಿಗೆ ತಿಳಿಸಿದರು.
ಕ್ಷೇತ್ರದ ಆಶ್ರಯ ಬಡಾವಣೆಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದು, ಸದರಿ ಫಲಾನುಭವಿಗಳು ತಮಗೆ ಹಂಚಿಕೆಯಾಗಿದ್ದ ಮನೆ ಮಾರಾಟ/ ಕ್ರಯಕ್ಕೆ ನೀಡಿದ್ದು, ಮಾರಾಟ/ಕ್ರಯಕ್ಕೆ ಪಡೆದಿರುವ ಎರಡನೇ ವ್ಯಕ್ತಿಗೆ ಆಶ್ರಯ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳಾದ ಅಡಮಾನ ಪತ್ರ, ಹಕ್ಕು ಪತ್ರ ಮತ್ತು ಹಕ್ಕು ಖುಲಾಸೆ ಪತ್ರಗಳನ್ನು ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಯಿತು.ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮಾರ್ಗಸೂಚಿ ಅನ್ವಯ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ತಹಸೀಲ್ದಾರ್ ಮಹೇಶ್, ಉಪ ಆಯುಕ್ತ ದಾಸೇಗೌಡ, ಆಶ್ರಯ ಸಮಿತಿ ಸದಸ್ಯರು, ಆಶ್ರಯ ಶಾಖೆಯ ಸಿಬ್ಬಂದಿ ಹಾಗೂ ವಲಯ ಕಚೇರಿ-3, 4, 5, 6 ರ ವಲಯಾಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಇದ್ದರು.