ಸಾರಾಂಶ
ಕಾಡಾನೆ ಜತೆ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಬಂಡೀಪುರ ಅರಣ್ಯ ಇಲಾಖೆಗೆ ₹25 ಸಾವಿರ ದಂಡ ಕಟ್ಟಿದ್ದಾರೆ. ಜೊತೆಗೆ ಬಂಡೀಪುರ ದ್ವಾರದ ಬಳಿ ನಿಂತು ಕಾಡಿನೊಳಗಿನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಪ್ರವಾಸಿಗರಿಗೆ ‘ನನಗಾದ ಅನುಭವ ನಿಮಗಾಗುವುದು ಬೇಡ. ವಾಹನ ಇಳಿಯದೆ ತೆರಳಿ’ ಎಂದು ಜಾಗೃತಿ ಮೂಡಿಸುವ ಶಿಕ್ಷೆ
ಗುಂಡ್ಲುಪೇಟೆ : ಕಾಡಾನೆ ಜತೆ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಬಂಡೀಪುರ ಅರಣ್ಯ ಇಲಾಖೆಗೆ ₹25 ಸಾವಿರ ದಂಡ ಕಟ್ಟಿದ್ದಾರೆ. ಜೊತೆಗೆ ಬರುವ ಶನಿವಾರ ಮತ್ತು ಭಾನುವಾರ ಬಂಡೀಪುರ ದ್ವಾರದ ಬಳಿ ನಿಂತು ಕಾಡಿನೊಳಗಿನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಪ್ರವಾಸಿಗರಿಗೆ ‘ನನಗಾದ ಅನುಭವ ನಿಮಗಾಗುವುದು ಬೇಡ. ವಾಹನ ಇಳಿಯದೆ ತೆರಳಿ’ ಎಂದು ಜಾಗೃತಿ ಮೂಡಿಸುವ ಶಿಕ್ಷೆಯನ್ನು ಅರಣ್ಯ ಇಲಾಖೆ ನೀಡಿದೆ.
ಕಾಡಾನೆ ದಾಳಿಯಿಂದ ಎದ್ನೋ ಬಿದ್ನೋ ಎಂಬಂತೆ ಸಣ್ಣ ಪುಟ್ಟ ಗಾಯಗಳಾಗಿದ್ದ ಬಸವರಾಜು ಸ್ನೇಹಿತರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದ. ಆದರೆ, ಮನೆಯಲ್ಲಿದ್ದವನನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ ಬಂಡೀಪುರಕ್ಕೆ ಕರೆತಂದು ₹25 ಸಾವಿರ ದಂಡ ಕಟ್ಟಿಸಿದ್ದರು.
ಅರಣ್ಯ ಇಲಾಖೆ ಬಸವರಾಜುವಿಗೆ ಬರುವ ಶನಿವಾರ ಮತ್ತು ಭಾನುವಾರ ಬಂಡೀಪುರ ಕಾಡು ಪ್ರವೇಶಿಸುವ ಮೇಲುಕಾಮನಹಳ್ಳಿ ಬಳಿ ದ್ವಾರದ ಬಳಿ ನಿಂತು ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ ಎಂದು ಎಸಿಎಫ್ ಎನ್.ಪಿ.ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ. 10 ನಾಮಫಲಕ ಅವರೇ ಬರೆಸಿಕೊಂಡು ಬಂದು ಬಂಡೀಪುರ ಹೆದ್ದಾರಿಯಲ್ಲಿ ಪ್ರಮುಖ ಸ್ಥಳದಲ್ಲಿ ಹಾಕಲು ಸೂಚನೆ ನೀಡಿದ್ದಾರೆ.