ಚಂದ್ರಶೇಖರ ಭಾರತೀ ಐಟಿಐ ಕಾಲೇಜಲ್ಲಿ ಉದ್ಯೋಗ ಮೇಳ

| Published : May 22 2024, 12:50 AM IST

ಸಾರಾಂಶ

ಸಂಸ್ಥೆಯ ಸಂಸ್ಥಾಪಕ, ದಿ.ಹಾರನಹಳ್ಳಿ ರಾಮಸ್ವಾಮಿಯವರ ಆಶಯದಂತೆ ಇಂದು ನಮ್ಮ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಈ ಕಾಲೇಜನ್ನು ತೆರೆದು ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕಾರಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಾಲೆಕಲ್ ತಿರುಪತಿಯಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಐಟಿಐ ಕಾಲೇಜು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳು 270 ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಂದ್ರಶೇಖರ ಭಾರತೀ ವಿದ್ಯಾದತ್ತಿ ನಿರ್ದೇಶಕ ಟಿ. ಆರ್. ನಾಗರಾಜ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಉದ್ಯೋಗದ ಭವಿಷ್ಯ ನೀಡಲು ಇಲ್ಲಿ ಐಟಿಐ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಸಂಸ್ಥಾಪಕರ ಮೂಲ ಉದ್ದೇಶ ಸಾಕಾರಗೊಳ್ಳುತ್ತಿದೆ. ಪರಿಶ್ರಮವಿಲ್ಲದೇ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ, ಉದ್ಯೋಗ ದೊರೆತಾಗ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಿಂದಲೇ ಕಲಿಕಾ ಆಸಕ್ತಿ ಮತ್ತು ಶ್ರದ್ಧೆ ಹೊಂದಿದ್ದಲ್ಲಿ ಭವಿಷ್ಯದ ಜೀವನದಲ್ಲಿ ಬಹಳ ಸಹಕಾರಿಯಾಗುತ್ತದೆ. ವಿವಿಧ ಕಂಪನಿಗಳ ಪ್ರತಿನಿಧಿಗಳು ಇಂದು ಆಗಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಮುಂದೆ ಬಂದಿರುವುದು ಹರ್ಷ ತಂದಿದೆ, ಮುಂದಿನ ದಿನಗಳಲ್ಲಿಯೂ ನಿಮ್ಮ ಸಹಕಾರ ಹೀಗೆ ಇರಬೇಕೆಂದು ಕೋರಿದರು.

ಶ್ರೀ ಚಂದ್ರಶೇಖರ ಭಾರತಿ ಐಟಿಐ ಪ್ರಾಚಾರ್ಯ ಸುರೇಶ್ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ, ದಿ.ಹಾರನಹಳ್ಳಿ ರಾಮಸ್ವಾಮಿಯವರ ಆಶಯದಂತೆ ಇಂದು ನಮ್ಮ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಈ ಕಾಲೇಜನ್ನು ತೆರೆದು ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕಾರಣರಾಗಿದ್ದಾರೆ. ನಮ್ಮ ಕಾಲೇಜಿನ ಮನವಿಗೆ ಸ್ಪಂದಿಸಿ ಬಂದಿರುವ ಕಂಪನಿಗಳ ಪ್ರತಿನಿಧಿಗಳಿಗೆ ನಾವು ಆಭಾರಿಯಾಗಿದ್ದೇವೆ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಆಗಮಿಸಿದ್ದಾರೆ ಎಂದರು.

ಬಯೋಟೆಕ್ ಬ್ರ್ಯಾಂಚ್ ಮ್ಯಾನೇಜರ್ ಹರೀಶ್ ಅಕ್ಷಯ್, ಇನ್ ಕ್ಯಾಪ್ ಕಂಪನಿಯ ಸೀನಿಯರ್ ಎಕ್ಸಿಕ್ಯೂಟಿವ್ ಆನಂದ್, ಟೆಕ್ ಕಂಪನಿಯ ಜ್ಞಾನೇಶ್, ಅವರು ಮಾತನಾಡಿ, ತಮ್ಮ ತಮ್ಮ ಕಂಪನಿಯ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಸಂತೋಷ್ ಉದ್ಯೋಗ ಆಕಾಂಕ್ಷಿಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಶ್ರೀಚಂದ್ರಶೇಖರ ಭಾರತೀ ಇಂಟರ್ನ್ಯಾಷನಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹಂಸಿತ ಮೌದ್ಗಲ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ 4ನೇ ರ್‍ಯಾಂಕ್ ಗಳಿಸಿದ್ದು, ಆ ವಿದ್ಯಾರ್ಥಿನಿಯನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜು ಅಧೀಕ್ಷಕ ಅಶೋಕ್ ನಾಡಿಗ್ ನಿರ್ವಹಿಸಿದರು.

ಚಂದ್ರಶೇಖರ ಭಾರತಿ ಶಾಲಾ ಆಡಳಿತ ಅಧಿಕಾರಿ ಸಾಲಪುರ ಗೋಪಾಲ್, ಸಂಸ್ಥೆಯ ಸದಸ್ಯ ಹಾಗೂ ತಾಲೂಕು ಬ್ರಾಹ್ಮಣ ಸಂಘದ ನಿರ್ದೇಶಕ ಕಳಸಾಪುರ ರಘು ಉಪಸ್ಥಿತರಿದ್ದರು.