ಗದಗ ಜಿಲ್ಲೆಯಲ್ಲಿ ಮಾರ್ಗ ಬದಲಿಸಿ ಅಕ್ರಮ ಮರಳು ಸಾಗಾಟ

| Published : Feb 20 2024, 01:49 AM IST

ಸಾರಾಂಶ

ಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ಅಧಿಕಾರಿಗಳು ಮುಖ್ಯ ಮಾರ್ಗಗಳಲ್ಲಿ ತಪಾಸನೆ ಚುರುಕುಗೊಳಿಸಿದ್ದರಿಂದ ಅಕ್ರಮ ದಂಧೆಕೋರರು ನಿತ್ಯವೂ ಮಾರ್ಗ ಬದಲಿಸಿ ಸಾಗಾಟ ಮಾಡುತ್ತಿದ್ದ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ.

ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ಅಧಿಕಾರಿಗಳು ಮುಖ್ಯ ಮಾರ್ಗಗಳಲ್ಲಿ ತಪಾಸನೆ ಚುರುಕುಗೊಳಿಸಿದ್ದರಿಂದ ಅಕ್ರಮ ದಂಧೆಕೋರರು ನಿತ್ಯವೂ ಮಾರ್ಗ ಬದಲಿಸಿ ಸಾಗಾಟ ಮಾಡುತ್ತಿದ್ದ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ.ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ, ತಂಗೋಡ, ಹೆಬ್ಬಾಳ, ತೊಳಲಿ, ಕಲ್ಲಾಗನೂರ ಗ್ರಾಮಗಳ ವ್ಯಾಪ್ತಿಯಲ್ಲಿನ ತುಂಗಭದ್ರಾ ನದಿ ತಟದಲ್ಲಿ ಅಕ್ರಮವಾಗಿ ಬೋಟ್‌ಗಳನ್ನು ಬಳಸಿ ಮರಳು ತೆಗೆದು ಅದನ್ನು ಸಂಗ್ರಹಿಸಿ ಮಾರಾಟ ಮಾಡುವ ಜಾಲವನ್ನು ಶಿರಹಟ್ಟಿ ಪೊಲೀಸರು, ಕಂದಾಯ ಇಲಾಖೆ ಜ. 7ರಂದು ಪತ್ತೆ ಮಾಡಿ ದಾಳಿ ಮಾಡಿದ್ದರು. ಅಂದು ಬೋಟ್ ಮತ್ತು ಮರಳು ಬಿಟ್ಟು ಪರಾರಿಯಾಗಿದ್ದ ಅಕ್ರಮ ದಂಧೆಕೋರರು ನಾಲ್ಕಾರು ದಿನ ಸುಮ್ಮನೇ ಕುಳಿತು, ಈಗ ಮತ್ತೆ ಪ್ರಾರಂಭಿಸಿದ್ದು ನದಿಯ ಆಚೆ ದಂಡೆಯ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳೆತ್ತಿ ಸಾಗಾಟ ಮಾಡುತ್ತಿದ್ದಾರೆ.

ರಾತ್ರಿ ಸಿಗುವ ಮರಳು: ಗದಗ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಎಲ್ಲಾ ಹಳ್ಳಗಳಲ್ಲಿಯೂ ಗುಣಮಟ್ಟದ ಕಪ್ಪು ಮರಳು ಲಭ್ಯವಿದೆ. ಇದನ್ನು ಪ್ಲೋರಿಂಗ್ ಟೈಲ್ಸ್ ಹಾಕಲು ಬಳಸುತ್ತಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಜೋರಾಗಿ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಈ ದಂಧೆ ತೆರೆದುಕೊಳ್ಳುತ್ತದೆ. ಕೇವಲ ಟ್ರ್ಯಾಕ್ಟರ್ ಗಳ ಮೂಲಕ ನಡೆಯುವ ಈ ದಂಧೆ ಮಧ್ಯರಾತ್ರಿ 2ಕ್ಕೆ ಪ್ರಾರಂಭವಾಗಿ ಬೆಳಗಿನ 4ರ ವರೆಗೆ ಮಾತ್ರ ನಡೆಯುತ್ತದೆ. ಈ ಮರಳು ರಾತ್ರಿ ಮಾತ್ರ ಲಭ್ಯವಿದ್ದು, ಬೆಳಗ್ಗೆ ನೋಡಿದರೆ ಏನೂ ನಡದೇ ಇಲ್ಲ ಎನ್ನುವಂತೆ ಇರುತ್ತದೆ.ಅಧಿಕಾರಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆಯಾ ಗ್ರಾಮದ ಯುವಕರನ್ನು ಅಲ್ಲಿನ ಮಾರ್ಗಗಳಲ್ಲಿ ಕಾವಲು ನಿಲ್ಲಲು ತಿಳಿಸಿ ದಾಳಿಗಳಿಂದ ಬಚಾವ್ ಆಗುತ್ತಿದ್ದಾರೆ. ಇದಕ್ಕಾಗಿ ಯುವಕರಿಗೆ ಅವರು ಭಾರೀ ಸಂಬಳ ಹಾಗೂ ದುಬಾರಿ ಮೊಬೈಲ್‌ಗಳನ್ನು ಕೊಡುಗೆಯಾಗಿ ನೀಡುತ್ತಿರುವ ಮಾಹಿತಿ ಇದೆ.