ಸಾರಾಂಶ
ಭಾರತದ ಗ್ರಂಥಾಲಯ ಪಿತಾಮಹ ಪದ್ಮ ಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಇತ್ತೀಚೆಗೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತದ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಇತ್ತೀಚೆಗೆ ಆಚರಿಸಲಾಯಿತು. ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ ಕಚೇರಿ ಹಾಗೂ ಇದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ , ಕುಶಾಲನಗರ ಶಾಖಾ ಗ್ರಂಥಾಲಯಗಳು, ಮೇಲ್ಜರ್ಜೆಗೇರಿದ ಮುಳ್ಳುಸೋಗೆ ಗ್ರಂಥಾಲಯ, ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯ, ಅಲೆಮಾರಿ ಸಮುದಾಯ ಗ್ರಂಥಾಲಯ, ಜಿಲ್ಲಾ ಕಾರಾಗೃಹ ವಾಚನಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಪುಸ್ತಕ ಪ್ರದರ್ಶನ ಏರ್ಪಡಿಸುವ ಮೂಲಕ ಆಚರಿಸಲಾಯಿತು.ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿ ಕಚೇರಿಯಲ್ಲಿ ಪುಸ್ತಕ ಪ್ರದರ್ಶನವನ್ನು ವಿಶ್ರಾಂತ ಆಕಾಶವಾಣಿ ಉದ್ಘೋಷಕರು ಹಾಗೂ ಸಾಹಿತಿ ಸುಬ್ರಾಯ ಸಂಪಾಜೆ ಅವರು ಉದ್ಘಾಟಿಸಿದರು. ಸಾರ್ವಜನಿಕ ಓದುಗರನ್ನು ಉದ್ದೇಶಿಸಿ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆಯ ಈ ಸುಸಂದರ್ಭದಲ್ಲಿ ಗ್ರಂಥಪಾಲಕರ ದಿನಾಚರಣೆ ಆಚರಿಸುವುದು ಅರ್ಥಪೂರ್ಣವಾಗಿದೆ ಎಂದರು. ‘ಗ್ರಂಥಾಲಯವು ಅಕ್ಷರದ ಮೂಲಕ ತಿಳುವಳಿಕೆಯನ್ನು ಜ್ಞಾನ ಸಂಪತ್ತನ್ನು ಲೋಕದ ಮನಸ್ಸು ಮನಸ್ಸುಗಳಿಗೆ ಪಸರಿಸುವಂತಹ ಕೆಲಸ ಮಾಡುತ್ತಿದೆ. ಅಕ್ಷರ ಎನ್ನುವುದೇ ಒಂದು ಅರ್ಥಪೂರ್ಣ ಶಬ್ದ. ಅಕ್ಷರ ಜ್ಞಾನ, ಇಂತಹ ಜ್ಞಾನ ಸಂಪತ್ತನ್ನು ಒದಗಿಸುವುದೇ ಗ್ರಂಥಾಲಯಗಳು ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವಾದ ವಸ್ತು ಬೇರೊಂದಿಲ್ಲ ಎಂದು ಹೇಳುತ್ತಾ ಯುವ ಪೀಳಿಗೆಯು ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಗ್ರಂಥಪಾಲಕರ ದಿನಾಚರಣೆ ನಿಮಿತ್ತ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಾದ ಪ್ರಬಂಧ, ಆಶುಭಾಷಣ, ಚಿತ್ರಕಲೆ, ಭಾವಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಿಬ್ಬಂದಿ ವರ್ಗದವರು ಹಾಜರಿದ್ದರು.