ಸಾರಾಂಶ
ಕನ್ನಡ ಪ್ರಭವಾರ್ತೆ ಜಗಳೂರು
ಲೇಖಕ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಪರಂಪರೆಯನ್ನು ವೈಭವೀಕರಸದೇ ವಸ್ತುನಿಷ್ಟವಾಗಿ ಎಲ್ಲ ಸಂಸ್ಕೃತಿ ಪರಂಪರೆಗಳನ್ನು ಒಳಗೊಳ್ಳುವ ಮೂಲಕ ವಸ್ತು ನಿಷ್ಟವಾಗಿ ಜಾನಪದ ಅಧ್ಯಯನ ಮಾಡಿ ‘ಜಗಲೂರು ಸೀಮೆಯ ಜಾತ್ರೆಗಳ ಸಾಂಸ್ಕೃತಿಕ ಅವಲೋಕನ’ ಪುಸ್ತಕದಲ್ಲಿ ಜಾತ್ರೆಗಳ ವಿಶಿಷ್ಟತೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಸಂಸ್ಕೃತಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಜಿಬಿಟಿ ಪಬ್ಲಿಕೇಷನ್ ಹೊರತಂದ ‘ಜಗಲೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನ ಪುಸ್ತಕ ಅನಾವರಣ’ ಕಾರ್ಯಕ್ರಮದಲ್ಲಿ ಲೇಖಕರ ತಾಯಿ ಹನುಮಕ್ಕ ಅನಾವರಣಗೊಳಿಸಿದ ನಂತರ ಮಾತನಾಡಿದರು.
ಬುಡಕಟ್ಟು ಸಂಸ್ಕೃತಿ, ದಲಿತ ಸಮುದಾಯದ ಹೆಚ್ಚಿರುವ ಜಗಳೂರು ಸೀಮೆಯಲ್ಲಿ ಪರಂಪರೆಗಳು, ಜಾತ್ರೆಗಳು ಸಾಕಷ್ಟು ಬದಲಾವಣೆಗಳಾಗಿವೆ. ಮಹಿಳಾ ಪ್ರಧಾನ, ಬುಡಕಟ್ಟು ಸಂಸ್ಕೃತಿ, ಜಗಲೂರು ಸೀಮೆಯ ಇತಿಹಾಸ, ಶಾಸನಗಳ ಉಲ್ಲೇಖಿಸಿ ತಾಳ್ಮೆಯಿಂದ ಅಧ್ಯಯನ ಅಳಿ ತಪ್ಪದ ರೀತಿಯಲ್ಲಿ ಬುಡಕಟ್ಟು, ಸೀಮೆ, ಜಾತಿ, ಧಾರ್ಮಿಕ ಸಂಸ್ಕೃತಿ, ಶಾಸನ, ವಿಷಯ ಅಧ್ಯಯನ ಪರಿಪೂರ್ಣವಾಗಿದೆ. ಪರಿಚಯಾತ್ಮಕವಾಗಿರುವ ಮಾಹಿತಿ ಇದರಲ್ಲಿದೆ ಎಂದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, 500 ಪ್ರತಿಗಳನ್ನು ಖರೀದಿಸಿ ಜನತೆಗೆ ಹಂಚುವ ಮೂಲಕ ಜಗಲೂರಿನ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಭವಿಷ್ಯದ ಪೀಳಿಗೆಗೆ ಉಳಿಸುವ ಕಾರ್ಯ ಮಾಡುವುದಾಗಿ ಹೇಳಿದರು.
ಹಾವೇರಿಯ ಗೊಟಗೋಡಿ ಜಾನಪದ ವಿವಿ ಕುಪಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ, ಬುದ್ಧ ಗೌತಮನಿಗೆ ಹೇಳಿದಂತೆ ಬೌತಿಕ ಸಂಪತ್ತನ್ನು ಹಂಚಬಹುದು ಆದರೆ ಬೌದ್ಧಿಕ ಸಂಪತ್ತನ್ನು ಹಂಚಲು ಆಗುವುದಿಲ್ಲ. ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ರಚಿಸಿರುವ ಈ ಕೃತಿ ವಸ್ತುನಿಷ್ಠವಾದ ಕೃತಿಯಾಗಿದ್ದು, ಬಯಲು ಸೀಮೆಯ ಜಾತ್ರೆಗಳ, ರಥೋತ್ಸವಗಳ ವಿಶೇಷತೆಗಳನ್ನು ಕಟ್ಟಿಕೊಡಲಾಗಿದೆ ಎಂದರು.ಲೇಖಕ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, 18 ವರ್ಷಗಳ ಸಂಶೋಧನೆಯಲ್ಲಿ ಸಾಕಷ್ಟು ಕ್ಷೇತ್ರ ಅಧ್ಯಯನ ಮಾಡಿ ಈ ಕೃತಿ ರಚನೆಗೆ ಕುಳಿತಾಗ ಸಾಕಷ್ಟು ಸವಾಲುಗಳು ಎದುರಾದವು. ನಮ್ಮ ಸೀಮೆಯ ಸಣ್ಣ ಸಣ್ಣ ಸಮುದಾಯಗಳ ಜಾತ್ರೆ, ರಥೋತ್ಸವ, ಪರವು, ಬುಡಕಟ್ಟು ಸಂಸ್ಕøತಿಗಳ ಆಚರಣೆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಈ ಮಣ್ಣಿನ ಮತ್ತು ತಾಯಿಯ ಋಣ ತೀರಿಸಲು ಅವಕಾಶ ಸಿಕ್ಕಿತು. ಇನ್ನೂ ಸಾಷಕ್ಟು ಜಾತ್ರೆಗಳ ಬಗ್ಗೆ ಸೇರ್ಪಡೆಯಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಸೇರಿಸುವ ಪ್ರಯತ್ನ ಮಾಡುತ್ತೇನೆ. ಕೃತಿ ಹೊರಬರಲು ನನಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಚಿರಋಣಿ ಎಂದರು.
ಜಾನಪದ ವಿದ್ವಾಂಸ ಡಾ.ಬಸವರಾಜ್ ನೆಲ್ಲಿಸರ ಮಾತನಾಡಿ, ಅನೇಕ ಸಂಶೋಧಕರು ನನ್ನ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಆದರೆ ನನ್ನ ಸಂಶೋಧನಾ ವಿದ್ಯಾರ್ಥಿ ಡಾ.ಅಶೋಕ್ ಕುಮಾರ್ ಅವರಲ್ಲಿ ವಿಷಯ ವಸ್ತುವಿನ ಬಗ್ಗೆ ಆಸಕ್ತಿಯಿದ್ದ ಕಾರಣ ಇಂತಹ ಸಾಂಸ್ಕೃತಿಕ ಅವಲೋಕನ ಕೃತಿ ಹೊರ ಬರಲು ಸಾಧ್ಯವಾಯಿತು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಸವಪ್ಪ ವಹಿಸಿದ್ದರು. ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿ, ದೊಣೆಹಳ್ಳಿ ಗುರುಮೂರ್ತಿ, ಬಿಬಿಟಿ ಪಬ್ಲಿಕೇಷನ್ಸ್ನ ಮಾಲೀಕ ಮೋಹನ್ಕುಮಾರ್, ಸುಭಾಷ ಚಂದ್ರಬೋಸ್ ಡಾ.ಯಾದವರೆಡ್ಡಿ, ಜೆ.ಎಂ.ಮಲ್ಲಿಕಾರ್ಜುನಯ್ಯ, ದಾದಾಪೀರ್ ನವಿಲೇಹಾಳ್ ಸೇರಿದಂತೆ ಸಾಹಿತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿಭವನದವರೆಗೆ ಎತ್ತಿನಗಾಡಿಯಲ್ಲಿ ಭುವನೇಶ್ವರಿ ಭಾವಚಿತ್ರ ಮತ್ತು ಪುಸ್ತಕದ ಮುಖಪುಟವನ್ನು ನಂದಿಕೋಲು, ಡೊಳ್ಳು, ಪೋತರಾಜರ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೂಲಕ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.