ಸಾರಾಂಶ
ಧಾರವಾಡ:
ದೇವರಿಗೆ ಹರಕೆ ಹೊತ್ತರೆ, ಬದುಕು ಬದಲಾಗದು. ಬದುಕಿನ ಬದಲಾವಣೆಗೆ ಶಿಕ್ಷಣವೇ ಕಾರಣ. ಇದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಬಹಳ ದೊಡ್ಡ ನಿದರ್ಶನವೆಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಹೇಳಿದರು.ಭಗವಾನ್ ಬುದ್ಧ ಪ್ರತಿಷ್ಠಾನ ಟ್ರಸ್ಟ್, ಗಣಕರಂಗ ಹಾಗೂ ಬಹಿಷ್ಕೃತ ಹಿತಕಾರಣಿ ಸಭಾ ಜಂಟಿಯಾಗಿ ಬುಧವಾರ ನಗರದಲ್ಲಿ ಆಯೋಜಿಸಿದ್ದ 2568ನೇ ಬುದ್ಧ ಪೂರ್ಣಿಮೆ ಆಚರಣೆ ಉದ್ಘಾಟಿಸಿದ ಅವರು, ಬುದ್ಧನ ಜೀವನ ಮತ್ತು ತತ್ವಗಳಿಗೆ ಮನಸೋತು ಶಿಕ್ಷಣ ಪಡೆದು ಜ್ಞಾನಸೂರ್ಯನಾಗಿ ಲೋಕ ಬೆಳಗಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನರಥ ಇನ್ನೂ ಚಲಿಸುತ್ತಿದೆ. ಈ ಜ್ಞಾನವನ್ನು ಶೋಷಿತ ಸಮುದಾಯಗಳ ಜನರ ಬದುಕಿನ ಬದಲಾವಣೆಗೆ ಬಳಸಬೇಕೆಂದು ಕರೆ ನೀಡಿದರು.
ಅನಿವಾಸಿ ಭಾರತೀಯ ರಾಜೀವ್ ಕೃಷ್ಣ ಮೇತ್ರಿ, ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಹೇಮಂತ್ ರಾಮಡಗಿ ಹಾಗೂ ಹಿರಿಯ ಸಾಹಿತಿ ಸಿ.ಎಂ. ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ತಮ್ಮ ಬದುಕಿನ ಜೀವನಾನುಭವಗಳನ್ನು ಮೆಲುಕು ಹಾಕಿದರು.ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಬುದ್ಧ ಅನುಯಾಯಿ ಬಂತೆ ಧಮ್ಮಪಾಲ, ಧಾರವಾಡದ ಪಬ್ಬಜೋರವಿತಿಪಾಲಿವಿಜ್ಜಾಮುನಿಯೋ, ಬುದ್ಧನ ತತ್ವಗಳಿಗೆ ಮಾತ್ರ ಜಗತ್ತನ್ನು ಬೆಳಗಬಲ್ಲ ಶಕ್ತಿ ಇದೆ. ಆತನ ಜೀವನ ಬಹಳ ದೊಡ್ಡ ಸಂದೇಶ ನೀಡುತ್ತದೆ ಎಂದರು.
ಬುದ್ಧನ ಜೀವನ ಮತ್ತು ಡಾ. ಅಂಬೇಡ್ಕರ್ ಬದುಕನ್ನು ಆಳವಾಗಿ ಅಧ್ಯಯನ ಮಾಡಿದರೆ ಬದುಕು ಬದಲಾಗುತ್ತದೆ. ಅವರ ತತ್ವಗಳನ್ನು ಅನುಸರಿಸಿ, ಅನುದಿನದ ಬದುಕಿನಲ್ಲಿ ಆಚರಿಸಬೇಕೆಂದು ಅಧ್ಯಕ್ಷತೆ ವಹಿಸಿದ್ದ ಡಾ. ಧನವಂತ ಹಾಜವಗೋಳ ಹೇಳಿದರು.ಡಾ. ಸದಾಶಿವ್ ಮರ್ಜಿ, ಡಾ. ಅನಿಲ ಮೇತ್ರಿ, ಸಿದ್ದರಾಮ ಹಿಪ್ಪರಗಿ, ಡಾ. ಪ್ರಕಾಶ ಮಲ್ಲಿಗವಾಡ, ಗಾಳೆಮ್ಮನವರ ಭಾಗ್ಯಶ್ರೀ ಹಾಗೂ ಸೈಯದ್ ಎಂ.ಎ. ಅವರ ತಂಡದವರು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಡಾ. ಅರುಣ್ ಕಲ್ಲೋಳಿಕರ, ಡಾ. ಅನಿಲ್ ಮೇತ್ರಿ, ಡಾ. ಸುಭಾಷ್ ನಾಟಿಕಾರ, ಡಾ. ಮಂಜುನಾಥ, ಶರಣಪ್ಪ ಹೊಸಮನಿ, ಆರ್.ಎನ್. ಬೇವಿನಕಟ್ಟಿ, ಚಂದ್ರಕಾಂತ್ ದೊಡ್ಡಮನಿ, ಚಂದ್ರಶೇಖರ ಕಮಲದಿನ್ನಿ, ವೈ.ಬಿ. ಚಲವಾದಿ ಇದ್ದರು.