ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಎರಡು ದಶಕಗಳಲ್ಲಿ ವಿದೇಶದಲ್ಲಿ ಭಾರತದ ಕುರಿತಾದ ದೃಷ್ಟಿಕೋನ ಬದಲಾಗಿದೆ. ಭಾರತ ಮತ್ತು ಭಾರತೀಯರ ಬಗ್ಗೆ ವಿದೇಶಿಗರು ವಿಶ್ವಾಸ ಮತ್ತು ಹೆಮ್ಮೆ ಪಡುತ್ತಿದ್ದಾರೆ ಎಂದು ಇಂಡಿಯನ್ ಫೌಂಡೇಶನ್ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ರಾಮ ಮಾಧವ ಹೇಳಿದರು.ಬೆಳಗಾವಿಯ ಪ್ರಬುದ್ಧ ಭಾರತ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದೀನ ದಯಾಳ ಪೀಠದ ಸಹಯೋಗದಲ್ಲಿ ಕೆಎಲ್‌ಇ ಸೆಂಟನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಜರುಗಿದ ಎರಡು ದಿನದ ಏಕಾತ್ಮ ಮಾನವ ದರ್ಶನ ವಿಚಾರ ಸಂಕಿರಣದಲ್ಲಿ ಭಾರತ ಮತ್ತು ವಿದೇಶಾಂಗ ನೀತಿ ವಿಷಯದ ಕುರಿತು ಅವರು ಮಾತನಾಡಿದರು.
ವಿದೇಶಾಂಗ ನೀತಿ ಅತ್ಯಂತ ಜಟಿಲ ವಿಷಯ. ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ. ಇಲ್ಲಿ ಕೇವಲ ತಮ್ಮ ಆಸಕ್ತಿ ಮತ್ತು ಅದ್ಯತೆ ಅನುಸಾರ ಮಿತ್ರ ಮತ್ತು ಶತ್ರುಗಳಾಗಿ ಪರಿವರ್ತನ ಹೊಂದುತ್ತಾರೆ. ಸ್ವಾತಂತ್ರ್ಯ ನಂತರ ಅಲಿಪ್ತ ನೀತಿಯ ಪರಿಣಾಮ ಭಾರತ ಮೂರನೇ ಪ್ರತ್ಯೇಕ ಬಣದ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಆದರೆ, ಇಂದು ಭಾರತ ಎಲ್ಲ ರಾಷ್ಟ್ರಗಳೊಂದಿಗೆ ಸಮಾನ ಸ್ನೇಹ ಹಾಗೂ ಸಹಕಾರದ ಬಾಂಧವ್ಯ ಹೊಂದಿದೆ. ಇದರ ಪರಿಣಾಮ ಭಾರತದ ಪ್ರಾಬಲ್ಯ ಹೆಚ್ಚಿದೆ ಎಂದು ವಿಶ್ಲೇಷಿಸಿದರು.ಭಾರತ ಇಂದು ಎಲ್ಲ ದೇಶಗಳೊಡನೆ ಮಿತ್ರನಾಗಿ ಉತ್ತಮ ಬಾಂಧವ್ಯ ಹೊಂದಿದೆ. ಇಂದು ವಿಶ್ವಮಿತ್ರ ಮತ್ತು ಮುಂದಿನ ದಿನಗಳಲ್ಲಿ ವಿಶ್ವಗುರುವಾಗಿ ಭಾರತ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಯಜ್ಞನಾರಾಯಣ ಕಮ್ಮಾಜೆ, ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ್, ಪ್ರಬುದ್ಧ ಭಾರತದ ಸಹಸಂಯೋಜಕ ಅಪ್ಪಯ್ಯಾ ರಾಮರಾವ್, ಪ್ರೊ.ಬಿ.ಎಸ್. ನಾವಿ, ಡಾ.ಶಿವಲಿಂಗಯ್ಯಾ ಗೋಠೆ, ಡಾ.ಅನಿಲಕುಮಾರ ಗರಗ ಇತರರು ಇದ್ದರು.ಬೆದರಿಕೆಗಳೇ ಪತ್ರಕರ್ತರಿಗೆ ಭೂಷಣ: ಅಜಿತ್ ಹನುಮಕ್ಕನವರ್‌ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಕುರಿತಾಗಿ ಮಾತನಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಸಂಪಾದಕ ಅಜಿತ ಹಮನಕ್ಕನವರ, ತಿಂಗಳಿಗೊಮ್ಮೆ ಭ್ರಷ್ಟ ರಾಜಕಾರಣಿ, ದುರಾಡಾಳಿತ ನೀಡುವ ಅಧಿಕಾರಿಗಳು, ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬಂದಾಗಲೇ ನಾನು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸಮಾಧಾನ ಉಂಟಾಗುತ್ತದೆ. ಹಾಗಾಗಿ ಮೇಲಿಂದ ಮೇಲೆ ಎದುರಾಗುವ ಬೆದರಿಕೆಗಳು ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ ಎಂದು ಹೇಳಿದರು.ನಾಯ್ಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಂತೆ ಪತ್ರಿಕಾರಂಗ ಸಮಾಜದ ಉನ್ನತಿಗೆ ಶ್ರಮಿಸುತ್ತಿದೆ. ಆದರೆ ಕೆಲ ಬಾರಿ ಶಾಸಕಾಂಗ ಮತ್ತು ಕಾರ್ಯಾಂಗ ತಪ್ಪು ದಾರಿಯಲ್ಲಿ ಸಾಗುತ್ತಿರಬೇಕಾದರೆ ಚುರುಕು ಮುಟ್ಟಿಸುವ ಜವಾಬ್ದಾರಿ ಪತ್ರಿಕಾ ರಂಗದ್ದಾಗಿದೆ. ಸಮಾಜದಲ್ಲಿ ಮಾಧ್ಯಮದ ವರದಿಯಿಂದಾಗುವ ಅವಮಾನ ಮತ್ತು ಅಪಪ್ರಚಾರಕ್ಕೆ ಹೆದರಿ, ಯಾವುದೇ ಜನವಿರೋಧಿ ಮತ್ತು ಅಕ್ರಮಕ್ಕೆ ಅವಕಾಶ ನೀಡಿದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮಾಧ್ಯಮದ ಉಪಯುಕ್ತತೆ ಎನ್ನಬಹುದು ಎಂದು ಹೇಳಿದರು.
ಇತ್ತೀಚೆಗೆ ಕಾರ್ಯಾಂಗ ಮತ್ತು ನಾಯ್ಯಾಂಗ ವ್ಯವಸ್ಥೆಗಳನ್ನು ಭ್ರಷ್ಟರು ಇಂದು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಸಂಗತಿ. ಅವರ ವಿರುದ್ಧ ವರದಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಅವರು ನ್ಯಾಯಾಲಯಗಳ ಮೂಲಕ ವರದಿ ಪ್ರಸಾರಕ್ಕೆ ನಿರ್ಬಂಧ ಮತ್ತು ಕೆವಿಯಟ್ ಆದೇಶ ಪಡೆದಿರುತ್ತಾರೆ. ನ್ಯಾಯಾಲಯದ ಈ ಬಗೆಯ ಅದೇಶಗಳು ಮಾಧ್ಯಮಗಳ ಕಾರ್ಯನಿರ್ವಹಿಸಲು ದೊಡ್ಡತಡೆ ಉಂಟುಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಜಸ್ಟಿಸ್ ಅರವಿಂದ ಪಾಶ್ಚಾಪುರೆ ಮಾತನಾಡಿ, ನಾಯ್ಯಾಂಗದಿಂದ ದೊರೆಯುವ ಕೆವಿಯಟ್ ಆದೇಶ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗದ ಪ್ರಕಾರ ಆರೋಪ ಸಿದ್ಧವಾಗಿ ಅಪರಾಧಿ ಆದಾಗ ಮಾತ್ರ ಕೆವಿಯಟ್ ಆದೇಶ ಬಿದ್ದು ಹೋಗುವುದು. ನ್ಯಾಯಾಂಗ ವ್ಯವಸ್ಥೆ ಕೂಡ ಬ್ರಿಟಿಷರ ಕಾಲದಲ್ಲಿನ ಅನೇಕ ಪದ್ಧತಿ ಪರಿಷ್ಕರಣೆಗೆ ಒಳಪಡಿಸಿ, ಭಾರತೀಯ ನ್ಯಾಯ ಪದ್ಧತಿ ಜಾರಿಗೆ ತರುವ ಅವಶ್ಯಕತೆಯಿದೆ ಎಂದರು.ಮಾಧ್ಯಮಗಳು ಇತ್ತೀಚೆಗೆ ಟಿಆರ್‌ಪಿಯ ಜಾಲದಲ್ಲಿ ಕಳೆದು ಹೋಗಿವೆ. ಟಿಆರ್‌ಪಿ ಕಾರಣದಿಂದ ಯಾವ ಬಗೆಯ ಕಾರ್ಯಕ್ರಮ ಪ್ರಸಾರ ಮಾಡಬೇಕು ಮತ್ತು ಪ್ರಸಾರ ಮಾಡಬಾರದು ಎಂದು ನಿರ್ಧರಿತವಾಗುತ್ತದೆ. ಕಾರ್ಯಕ್ರಮ ವಿಕ್ಷಣೆ ಕುರಿತಾದ ಜನರ ಬಯಕೆ ಮತ್ತು ಅವರ ವೀಕ್ಷಣೆ ಈ ಎರಡು ಸಂಗತಿಗಳು ವೈರುಧ್ಯದಿಂದ ಕೂಡಿವೆ. ಹಾಗಾಗಿ ವಾಹಿನಿ ಸಂಸ್ಥೆಗಳಿಗೆ ಯಾವ ಬಗೆಯ ಕಾರ್ಯಕ್ರಮ ನಿರ್ಮಾಣ ಮಾಡಬೇಕು ಎಂಬುದು ಟಿಆರ್‌ಪಿಯೆ ಮಾನದಂಡವಾಗಿರುವುದು ಸೋಜಿಗದ ಸಂಗತಿ.
- ಅಜಿತ ಹನುಮಕ್ಕನವರ, ಸಂಪಾದಕ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ