ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ವೈವಿಧ್ಯಮಯ ಕೊಡವ ನೃತ್ಯ ಪ್ರಕಾರಗಳು ಚಂಗ್ರಾಂದಿ ಪತ್ತಲೋದಿಯ ಏಳನೆ ದಿನಕ್ಕೆ ಮೆರುಗು ನೀಡಿದವು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಡವ ಜಾನಪದ ಸೇರಿದಂತೆ ವಿವಿಧ ಕೊಡವ ಹಾಡುಗಳಿಗೆ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಚ್ಚಮಾಡ ಡಾಲಿ ಚಂಗಪ್ಪ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜಕ್ಕೆ ವಿಶೇಷ ಇತಿಹಾಸವಿದೆ. ಮೊದಲು ನ್ಯಾಯಪೀಠ ನಡೆಸುತ್ತಿದ್ದ ಕೊಡವ ಸಮಾಜ ಇಂದು ಬೇರೆ ಯಾವುದೇ ಕೊಡವ ಸಮಾಜಗಳು ಮಾಡದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮವನ್ನು ಹತ್ತು ದಿನಗಳವರೆಗೆ ಯಶಸ್ವಿಯಾಗಿ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಂದು ದೇಶಭಕ್ತ ಬಾಲ ಗಂಗಾಧರನಾಥ ತಿಲಕ್ ಹಿಂದುಗಳನ್ನು ಒಂದುಗೂಡಿಸಲು ಸಾರ್ವಜನಿಕ ಗಣೇಶ ಉತ್ಸವ ಆರಂಭಿಸಿದರು. ಅದೇ ರೀತಿ ಈ ಪತ್ತಲೋದಿ ಕಾರ್ಯಕ್ರಮ ಕೊಡವರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ಅಪ್ಪಚಂಗಡ ಮೋಟಯ್ಯ ಮಾತನಾಡಿ, ಕೊಡವರ ಸಂಸ್ಕೃತಿ ಕ್ಷೀಣಿಸದಿರಲು ಯುವಕರೆಲ್ಲ ಮದುವೆಯಾಗಿ ಕೊಡವರ ಜನಸಂಖ್ಯೆ ಹೆಚ್ಚಿಸಬೇಕು. ಹೆಣ್ಣು ಮಕ್ಕಳು ಮದುವೆಗೆ ಅನಾವಶ್ಯ ಹೆಚ್ಚು ಬೇಡಿಕೆ ಇಡಬಾರದು. ಪೋಷಕರು ಬುದ್ದಿ ಹೇಳಿ ಮಕ್ಕಳನ್ನು ಸೂಕ್ತ ವಯಸ್ಸಿಗೆ ಮದುವೆ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.ಕೊಡವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದು, ತಮ್ಮ ಪ್ರಾಮಾಣಿಕತೆಯಿಂದಲೇ ಹಲವು ಕೊಡವರು ಉನ್ನತಾಧಿಕಾರ ಪಡೆದುಕೊಂಡ ಬಹಳಷ್ಟು ಉದಾಹರಣೆಗಳಿವೆ. ಯಾರೂ ಪ್ರಾಮಾಣಿಕತೆ ಬಿಡಬೇಡಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ನಮ್ಮ ಕೊಡವ ಸಮಾಜದಲ್ಲಿ ಮಕ್ಕಡ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ದತ್ತಿನಿಧಿ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್, ಸದಸ್ಯರಾದ ಅಪ್ಪಚಂಗಡ ಲಲಿತ ಮೋಟಯ್ಯ, ಮಚ್ಚಮಾಡ ರೋಝಿ ಸುಮಂತ್, ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಚಟ್ಟಂಡ ಲೇಪಾಕ್ಷಿ ನಟೇಶ್ ಇದ್ದರು.
ಕೊಡವ ಸಮಾಜದ ಸದಸ್ಯೆ ಮುಕ್ಕಾಟಿರ ಉಷಾ ಪ್ರಾರ್ಥಿಸಿದರು. ನಿರ್ದೇಶಕಿಯರಾದ ತೀತೀರ ಅನಿತಾ ಸುಬ್ಬಯ್ಯ ಸ್ವಾಗತಿಸಿದರು. ಚಂಗುಲಂಡ ಅಶ್ವಿನಿ ಸತೀಶ್ ನಿರೂಪಿಸಿದರು. ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು. ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ನಿರ್ದೇಶಕರಾದ ಆಂಡಮಾಡ ಸತೀಶ್ ವಿಶ್ವನಾಥ್, ಬಾದುಮಂಡ ವಿಷ್ಣು ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.