ಸಾರಾಂಶ
ತಿಮ್ಲಾಪುರ ಗ್ರಾಮದ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸರಗಳ್ಳನು ರೈತನ ಕೊರಳಿಗೆ ಚಾಕು ಇರಿದ ಘಟನೆ ಮಂಗಳವಾರ ನಡೆದಿದೆ.
ಚನ್ನಗಿರಿ: ತಾಲೂಕಿನ ತಿಮ್ಲಾಪುರ ಗ್ರಾಮದ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸರಗಳ್ಳನು ರೈತನ ಕೊರಳಿಗೆ ಚಾಕು ಇರಿದ ಘಟನೆ ಮಂಗಳವಾರ ನಡೆದಿದೆ.
ಬಿಲ್ಲಹಳ್ಳಿ ಗ್ರಾಮದ ರೈತ ನಾಗರಾಜ (45)ನ ಚಾಕು ಇರಿತಕ್ಕೆ ಒಳಗಾಗಿದ್ದು, ಸಚಿನ್ ಎಂಬಾತನು ಕೃತ್ಯ ಎಸಗದ್ದವನು ಎಂದು ತಿಳಿದುಬಂದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ತಿಮ್ಲಾಪುರ ಗ್ರಾಮದ ಬಳಿಯ ಸ್ವಂತ ಅಡಿಕೆ ತೋಟದ ಕೆಲಸ ಮಾಡುತ್ತಿದ್ದಾಗ ಸಚಿನ್ ಎಂಬ ಸರಗಳ್ಳ ನಾಗರಾಜನ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಆಗ ಇವರಿಬ್ಬರು ಸೆಣಸಾಟ ನಡೆದಿದ್ದು, ಸರಗಳ್ಳನು ಚಾಕುವಿನಿಂದ ರೈತನ ಕುತ್ತಿಗೆ, ಎದೆ, ತಲೆಯ ಭಾಗದಲ್ಲಿ ಹಿರಿದು, ತಲೆಗೆ ಕಲ್ಲಿನಿಂದ ಜಜ್ಜಿದ್ದಾನೆ ಎಂದು ಗಾಯಾಳುವಿಗೆ ಚಿಕಿತ್ಸೆ ನೀಡಿದ ಚನ್ನಗಿರಿ ಸರ್ಕಾರಿ ಆಸ್ಫತ್ರೆಯ ವೈದ್ಯ ಡಾ.ಅಶೋಕ್ ತಿಳಿಸಿದ್ದಾರೆ.ಇವರ ಕಿರುಚಾಟ ಕೇಳಿದ ಅಕ್ಕಪಕ್ಕದ ತೋಟದ ರೈತರು ಬಂದು ಸರಗಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ನಾಗರಾಜ್‌ನನ್ನು ಚನ್ನಗಿರಿ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.