ಲೋಕಾ ಗಾಳಕ್ಕೆ ಸಿಕ್ಕಿ ಬಿದ್ದ ಚನ್ನಗಿರಿ ಜೆಇ, ಎಇಇ

| Published : Sep 28 2024, 01:18 AM IST

ಸಾರಾಂಶ

ಚನ್ನಗಿರಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ಬಿ.ಬಸವರಾಜ ಹಾಗೂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೆ.ಎಸ್.ಸತೀಶ ನಾಯ್ಕ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿಗಳು

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಪಂ ಮೇಲ್ಚಾವಣಿ ಮುಂದುವರೆದ ನಿರ್ಮಾಣ ಕಾಮಗಾರಿ ಹಾಗೂ ಸರ್ಕಾರಿ ಶಾಲೆ ಶೌಚಾಲಯದ ಕಾಮಗಾರಿ ಮಾಡಿದ್ದ ಸಿವಿಲ್ ಗುತ್ತಿಗೆದಾರನಿಗೆ ಬಿಲ್ ಮಂಜೂರು ಮಾಡಲು 20,800 ರು. ಲಂಚ ಕೇಳಿ, 10 ಸಾವಿರ ರು. ಲಂಚದ ಹಣ ಪಡೆಯುತ್ತಿದ್ದ ವೇಳೆ ಚನ್ನಗಿರಿ ಉಪ ವಿಭಾಗದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಿರಿಯ ಅಭಿಯಂತರ ಹಾಗೂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಲೋಕಾಯುಕ್ತರ ಗಾಳಕ್ಕೆ ಶುಕ್ರವಾರ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ.

ಚನ್ನಗಿರಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ಬಿ.ಬಸವರಾಜ ಹಾಗೂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೆ.ಎಸ್.ಸತೀಶ ನಾಯ್ಕ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿಗಳು. ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣದ ಪೊಲೀಸ್‌ ಕ್ವಾಟ್ರರ್ಸ್‌ನ ಶರಾವತಿ ಬ್ಲಾಕ್‌ನ ಸಿವಿಲ್ ಗುತ್ತಿಗೆದಾರ (ಕ್ಲಾಸ್-2) ಎಸ್.ಸುನಿಲ್‌(32 ವರ್ಷ) ನೀಡಿದ್ದ ದೂರಿನ ಮೇರೆಗೆ ಲಂಚ ಪಡೆಯುತ್ತಿದ್ದ ವೇಳೆ ಬಸವರಾಜ ಹಾಗೂ ಸತೀಶ ನಾಯ್ಕ ಹಣದ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹಾರೋನಹಳ್ಳಿ ಗ್ರಾಪಂ ಮೇಲ್ಚಾವಣಿಯ ಮುಂದುವರಿದ ನಿರ್ಮಾಣದ ಕಾಮಗಾರಿ, ಹೊಸಹಳ್ಳಿ ಸರ್ಕಾರಿ ಶಾಲೆ ಶೌಚಾಲಯ ನಿರ್ಮಿಸಲು ಕರ್ನಾಟಕ ಪಬ್ಲಿಕ್ ಪ್ರರ್ಕ್ಯೂಮೆಂಟ್‌ ಪೋರ್ಟ್‌ನಿಂದ ಟೆಂಡರ್ ಕರೆದಿದ್ದು, ಕಾಮಗಾರಿ ನಿರ್ವಹಿಸಲಾಗಿದೆ. ಗ್ರಾಪಂ ಕಾಮಗಾರಿ ಪೂರ್ಣಗೊಳಿಸಿದ್ದ ಗುತ್ತಿಗೆದಾರ ಸುನಿಲ್‌ ಹೊಸಹಳ್ಳಿ ಸರ್ಕಾರಿ ಶಾಲೆಯ ಶೌಚಲಯ ನಿರ್ಮಾಣದ ಕಾಮಗಾರಿಯ ಬಿಲ್‌ನನ್ನು ಪಾರ್ಟ್ ಬಿಲ್ ಮಾಡಿ, ಉಳಿದ ಬಿಲ್‌ ಮಂಡೂರು ಮಾಡಲು ₹20,800 ಲಂಚಕ್ಕೆ ಕಿರಿಯ ಅಭಿಯಂತರ ಬಿ.ಬಸವರಾಜ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಸತೀಶ ನಾಯ್ಕ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಷ್ಟವಿಲ್ಲದ ಗುತ್ತಿಗೆದಾರನು ಲೋಕಾಯುಕ್ತದಲ್ಲಿ ಜೆಇ, ಎಇಇ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಆರೋಪಿ ಎಂಜಿನಿಯರ್‌ಗಳು ಶುಕ್ರವಾರ ಪಿರ್ಯಾದಿ ಸುನಿಲ್ ರಿಂದ ₹10 ಸಾವಿರ ಲಂಚದ ಹಣ ಸ್ವೀಕರಿಸಿದ್ದು, ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ, ನಿರೀಕ್ಷಕರಾದ ಸಿ.ಮಧುಸೂದನ ಮಾರ್ಗದರ್ಶನದಲ್ಲಿ ಸಿಬ್ಬಂದಿಯಾದ ಆಂಜನೇಯ, ಸುಂದರೇಶ, ಆಶಾ, ಜಂಷಿದಾ ಬೇಗಂ, ಮಲ್ಲಿಕಾರ್ಜುನ, ಲಿಂಗೇಶ, ಮಂಜುನಾಥ, ಗಿರೀಶ, ಎಸ್.ಎನ್.ಕಡಕೋಳ, ಆನಂದ ತಳಕಲ್‌, ರಫೀ ಲಕ್ಷ್ಮೇಶ್ವರ, ಚಾಲಕರಾದ ವಿನಾಯಕ, ಮೋಹನ, ಬಸವರಾಜ, ಆನಂದಶೆಟ್ರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳಾದ ಕಿರಿಯ ಅಭಿಯಂತರ ಬಿ.ಬಸವರಾಜ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೆ.ಎಸ್.ಸತೀಶ ನಾಯ್ಕರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.