ಲಕ್ಷಕಂಠ ಗೀತಾ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

| Published : Nov 18 2025, 02:00 AM IST

ಸಾರಾಂಶ

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಭಾಗವಹಿಸಲು ನ.28 ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಮೋದಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಸೋಮವಾರ ಚಪ್ಪರ ಮೂಹೂರ್ತ ನಡೆಸಲಾಯಿತು.

28ರಂದು ಕಾರ್ಯಕ್ರಮ, ಪ್ರಧಾನಿ ಮೋದಿ ಭಾಗಿ

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಭಾಗವಹಿಸಲು ನ.28 ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಮೋದಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಸೋಮವಾರ ಚಪ್ಪರ ಮೂಹೂರ್ತ ನಡೆಸಲಾಯಿತು.ಇಲ್ಲಿನ ಗೀತಾಮಂದಿರ ಬಳಿಯ ವಿಶಾಲ ಬಯಲು ಪ್ರದೇಶದಲ್ಲಿ ಸುಮಾರು ಲಕ್ಷ ಮಂದಿ ಕುಳಿತು ಭಗವದ್ಗೀತೆ ಪಾರಾಯಣ ಮಾಡಲಿದ್ದು, ಅದಕ್ಕಾಗಿ ಈ ವಿಶಾಲ ಚಪ್ಪರವನ್ನು ಹಾಕಲಾಗುತ್ತಿದೆ. ಈ ಪಾರಾಯಣದ ಕೊನೆಯಲ್ಲಿ ಸುಮಾರು 12.30ರ ಹೊತ್ತಿಗೆ ಪ್ರಧಾನಿ ಮೋದಿ ಅವರು ಸೇರಿಕೊಂಡು ಗೀತಾ ಪಾರಯಣ ನಡೆಸಿ, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.ಈ ಚಪ್ಪರಮುಹೂರ್ತದ ಸಂದರ್ಭದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯರು, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು, ಶತಾವಧಾನಿ ರಾಮನಾಥಾಚಾರ್ಯ, ಗೀತೋತ್ಸವದ ಸಂಚಾಲಕ ಸುಪ್ರಸಾದ್ ಶೆಟ್ಟಿ, ಶಾಸಕ ಯಶ್ಪಾಲ್ ಸುವರ್ಣ, ಪ್ರಮುಖರಾದ ಕೆ.ಉದಯಕುಮಾರ್ ಶೆಟ್ಟಿ, ನವೀನ್ ಶೆಟ್ಟಿ ಕುತ್ಯಾರು, ಭುವನೇಂದ್ರ ಕಿದಿಯೂರು, ತಾರಾ ಉಮೇಶ್ ಆಚಾರ್ಯ, ಜ್ಯೋತಿ ಎಸ್. ದೇವಾಡಿಗ, ಗಿರೀಶ್ ಅಂಚನ್, ಶ್ರೀಕಾಂತ್ ನಾಯಕ್ ಅಲೆವೂರು ಮುಂತಾದವರಿದ್ದರು.