ಬಳ್ಳಾರಿ: ನಗರದ ಬಸವಭವನದಲ್ಲಿ ಜರಗುತ್ತಿರುವ ವರಗುರು ಮಹಾಮಹಿಮ ಗದ್ದಿಕೇರಿ-ನಂದೀಪುರದ ಚರಂತಪ್ಪಜ್ಜ ಸ್ವಾಮಿಗಳ 22ನೇ ಸ್ಮರಣೋತ್ಸವದ ಎರಡನೇ ದಿನವಾದ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯ ಕೈಂಕರ್ಯಗಳಿಗೆ ಸಾಕ್ಷಿಯಾಯಿತು.ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಸಂಶೋಧಕ ಡಾ.ಸಿ.ಶಿವಕುಮಾರ ಸ್ವಾಮಿಗಳ ಅವರ ರಚನೆಯ "ವಚನಾನು ಸಂಧಾನ " ಕೃತಿ ಲೋಕಾರ್ಪಣೆಗೊಳಿಸಲಾಯಿತು. ಕೃತಿ ಕುರಿತು ಮಾತನಾಡಿದ ಗಣ್ಯರು, ಕೃತಿಯಲ್ಲಿ ಬರುವ ಲಿಂಗೋದ್ಭವ, ಗರ್ಭಾಷ್ಟಮಿದೀಕ್ಷೆ, ಶಿವದೀಕ್ಷೆ, ಲಿಂಗದೀಕ್ಷೆ, ಭಸ್ಮ, ರುದ್ರಾಕ್ಷ ಪಂಚಾಚಾರ, ಷಟ್‌ಸ್ಥಲ, ಲಿಂಗಾಂಗ ಸಾಮರಸ್ಯ ಹಾಗೂ ಸಮಾಧಿ ಸಂಸ್ಕಾರ ಕುರಿತು ಸಂಶೋಧಕರು ಬರೆದಿರುವ ಲೇಖನಗಳ ಮಹತ್ವ ಕುರಿತು ತಿಳಿಸಲಾಯಿತು. ಬಳಿಕ ಆಕಾಶವಾಣಿ ಉದ್ಘೋಷಕ ಹಾಗೂ ಲೇಖಕ ಆಮಾತಿ ಬಸವರಾಜ್ ಅವರು "ಸಕ್ಕರೆ ಕರೆಡೇಶನವರ ಮರಿಕಲ್ಯಾಣದ ಪರಿಕಲ್ಪನೆ " ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶರಣ ಸಕ್ಕರೆ ಕರೆಡೇಶ ಅವರು ಸಮಾಜಸೇವೆ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸೇವೆ ಹಾಗೂ ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಅವರು ಕೈಗೊಂಡ ಅನೇಕ ಕಾರ್ಯಗಳ ಕುರಿತು ತಿಳಿಸಿಕೊಟ್ಟರು.

ನಂದಿಪುರ ಪುಣ್ಯಕ್ಷೇತ್ರದ ಪ.ಪೂ.ಡಾ.ಮಹೇಶ್ವರಸ್ವಾಮಿ, ಬೆಟ್ಟದೂರು ಪ್ರಭುಲಿಂಗೇಶ್ವರ ಮಠದ ಮಹಾದೇವ ದೇವಸ್ವಾಮಿ, ಜಂಗಮ ಹೊಸಹಳ್ಳಿ ಪುರವರ್ಗ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಚನಾನು ಸಂಧಾನ ಕೃತಿಯ ಲೇಖಕ, ಹಿರಿಯ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ, 579 ಕೃತಿಗಳ ಲೇಖಕ ಎಸ್‌.ವಿ. ಪಾಟೀಲ್ ಗುಂಡೂರವರ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಪ್ರಮುಖರಾದ ಪಲ್ಲೇದ ಪಂಪಾಪತೆಪ್ಪ, ಎರಿಸ್ವಾಮಿ ಬೂದಿಹಾಳುಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ, ನಂದೀಶ ಮಠಂ, ಮಸೀದಿಪುರ ಸಿದ್ಧರಾಮನಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ ಡಾ.ಎಚ್‌.ಎಂ.ಉಮಾ ಕಾರ್ಯಕ್ರಮ ನಿರ್ವಹಿಸಿದರು. ಚರಂತಪ್ಪಜ್ಜನವರ ಲೀಲೆಗಳ ಕುರಿತು ಹಿರಿಯ ಹಿಂದೂಸ್ತಾನಿ ಗಾಯಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರು ಪ್ರಸ್ತುತಪಡಿಸಿದರು. ಯೋಗೀಶ್ ಸಂಗನಕಲ್ಲು ತಬಲಸಾಥ್ ನೀಡಿದರು. ಕಾರ್ಯಕ್ರಮ ಶುರು ಮುನ್ನ ಅಕ್ಕನ ಬಳಗದಿಂದ ಸಿದ್ಧಾಂತ ಶಿಖಾಮಣಿ ಲಲಿತ ಸಹಸ್ರನಾಮ ಪಾರಾಯಣ ಜರುಗಿತು.