ಭಾವೈಕತೆಯ ಸರ್ವಧರ್ಮ ಸಮನ್ವಯ ರಥೋತ್ಸವ

| Published : Apr 02 2024, 01:07 AM IST

ಸಾರಾಂಶ

ಬಸವ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ರಥೋತ್ಸವಕ್ಕೆ ಚಾಲನೆ ನೀಡಿದರು.

ಹೊಸಪೇಟೆ: ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ಸೋಮವಾರ ಸಂಭ್ರಮ-ಸಡಗರದಿಂದ ಜರುಗಿತು.

ಬಸವ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಮಠದಿಂದ ಆರಂಭವಾದ ರಥೋತ್ಸವ ಪಾದಗಟ್ಟೆ ಆಂಜನೇಯ ದೇವಸ್ಥಾನದ ವರೆಗೆ ಭಕ್ತರು ಎಳೆದು ಪುನಃ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ನಂದಿಕೋಲು, ಗೊಂಬೆ ಕುಣಿತ, ವೀರಗಾಸೆ, ಭಜನೆ ತಂಡುಗಳು ಮೆರವಣಿಗೆಗೆ ಮೆರಗು ನೀಡಿದವು. ಬಾಳೆ ಹಣ್ಣು-ಹೂ ಎಸೆಯುವ ಮೂಲಕ ಭಕ್ತರು ಜಯಘೋಷ ಮೊಳಗಿಸಿದರು. ಈ ಸಂದರ್ಭದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ಎಳೆಯುವ ಪರಂಪರೆಯನ್ನು ಹುಟ್ಟು ಹಾಕಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಎಲ್ಲ ಧರ್ಮೀಯರು ಪರಸ್ಪರ ಪ್ರೀತಿ, ಸ್ನೇಹ ಸಹೋದರತ್ವ ಭಾವನೆಯಿಂದ ಸಮಾಜದಲ್ಲಿ ಸಹಬಾಳ್ವೆ ನಡೆಸಬೇಕು. ಇತ್ತೀಚೆಗೆ ದಿನಮಾನದಲ್ಲಿ ಜಾತಿ, ಜಾತಿ ನಡುವೆ ದ್ವೇಷ ಹಾಗೂ ಧರ್ಮ, ಧರ್ಮೀಯರ ನಡುವೆ ಕಲಹ ನಡೆಯುತ್ತಿವೆ. ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ಭಾವೈಕ್ಯತೆ ಸಾರುತ್ತಿದೆ ಎಂದರು.

ಲಿಂ. ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ದೂರದೃಷ್ಟಿಯಿಂದ ಈ ರಥೋತ್ಸವವನ್ನು ಆರಂಭಿಸಿದ್ದಾರೆ. ಭಗವದ್ಗೀತೆ, ಕುರಾನ್, ಬೈಬಲ್ ಹಾಗೂ ಎಲ್ಲ ಧರ್ಮ ಗ್ರಂಥಗಳನ್ನು ರಥದಲ್ಲಿ ಇರಿಸಿ, ವಿಶೇಷ ಪೂಜೆ ಸಲ್ಲಿಸಿ, ಎಲ್ಲ ಧರ್ಮ ಗುರುಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಈ ಮೂಲಕ ಮಾದರಿ ರಥೋತ್ಸವಕ್ಕೆ ಮುನ್ನುಡಿ ಬರೆದು ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.

ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಕಳೆದ ೨೦೧೭ ರಿಂದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ವತಿಯಿಂದ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವವನ್ನು ಲಿಂ. ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆಯಲ್ಲಿ ಆರಂಭಿಸುವ ಮೂಲಕ ಭಾವೈಕತ್ಯೆ ಸಾರಿದ್ದಾರೆ. ಸರ್ವ ಧರ್ಮದ ಬಾಂಧವರು ರಥೋತ್ಸವದಲ್ಲಿ ಭಾಗಿಯಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಇಲ್ಲಿನ ಜನರು ಸಾರಿದ್ದಾರೆ ಎಂದು ಹೇಳಿದರು. ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಕೊತ್ತಲ ಬಸವೇಶ್ವರ ಸಂಸ್ಥಾನ ಸೇಡಂ ಸದಾಶಿವ ಮಹಾಸ್ವಾಮಿಗಳು, ಶ್ರೀಧರಗಡ್ಡೆ ಕೊಟ್ಟೂರುಸ್ವಾಮಿ ಶಾಖಾಮಠದ ಮರಿಕೊಟ್ಟೂರು ದೇಶಿಕರು, ಬೂದಗುಂಪ ಶಾಖಾ ಮಠದ ಸಿದ್ದೇಶ್ವರ ದೇಶಿಕರು, ವ್ಯಾಕರನಾಳ ವಿಶ್ವೇಶ್ವರ ದೇವರು, ರಾಮಸಾಗರ ಶಿವಶರಣ ದೇವರು ಉಪಸ್ಥಿತರಿದ್ದರು. ಯುವ ಮುಖಂಡ ಸಿದ್ದಾರ್ಥ್ ಸಿಂಗ್, ಎಚ್.ಎನ್. ಮೊಹಮದ್ ಇಮಾಮ್ ನಿಯಾಜಿ, ಸಮಾಜದ ಮುಖಂಡರಾದ ಶರಣುಸ್ವಾಮಿ, ಸಾಲಿ ಸಿದ್ದಯ್ಯ ಸ್ವಾಮಿ, ಕೆ.ರವಿಶಂಕರ್, ಗೊಗ್ಗ ಚೆನ್ನಬಸವರಾಜ, ಕೆ.ಗಂಗಾಧರ, ಕೋರಿಶೆಟ್ಟಿ ನಿಂಗಪ್ಪ, ಎಲ್.ಬಸವರಾಜ, ಬಿ.ಚಿತ್ತಪ್ಪ, ಸಿ.ಎಸ್.ಶರಣಯ್ಯ ಸಹಸ್ರಾರು ಜನರು ಭಾಗವಹಿಸಿದ್ದರು.