ಅಪಾಯಕಾರಿ ತೊರೆಗೆ ಸ್ನಾನಕ್ಕೆ ಇಳಿದಿದ್ದವರ ಬಟ್ಟೆ ಹೊತ್ತೊಯ್ದ ಪೊಲೀಸರು!

| Published : Jul 11 2024, 01:40 AM IST

ಅಪಾಯಕಾರಿ ತೊರೆಗೆ ಸ್ನಾನಕ್ಕೆ ಇಳಿದಿದ್ದವರ ಬಟ್ಟೆ ಹೊತ್ತೊಯ್ದ ಪೊಲೀಸರು!
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ತೊರೆಗೆ ಇಳಿಯುವ ಮುನ್ನ ಬಿಚ್ಚಿಟ್ಟಿದ್ದ ಬಟ್ಟೆಗಳನ್ನು ಚಿಕ್ಕಮಗಳೂರು ವಿಭಾಗದ ಪೊಲೀಸ್ ಪ್ಯಾಟ್ರೋಲ್‌ ಸಿಬ್ಬಂದಿ ಹೊತ್ತೊಯ್ದು ತಮ್ಮ ವಾಹನದಲ್ಲಿ ಇರಿಸಿ ತಂಡವನ್ನು ಪೇಚಿಗೆ ಸಿಲುಕಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತುಂಬಿ ಹರಿಯುತ್ತಿದ್ದ ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಿದ್ದವರ ಬಟ್ಟೆಗಳನ್ನು ಪೊಲೀಸರು ಹೊತ್ತೊಯ್ದು ಬುದ್ಧಿ ಕಲಿಸಿದ ವಿದ್ಯಮಾನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಪೋಲಿಸರ ಈ ನಡೆ ಸಾರ್ವಜನಿಕರ ಪ್ರಶಂಸೆಗೊಳಗಾಗಿದೆ. ಚಾರ್ಮಾಡಿಯಲ್ಲಿ ಮಂಗಳವಾರ ತುಂಬಿ ಹರಿಯುತ್ತಿದ್ದ ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಾ ಕಲ್ಲು ಬಂಡೆ ಏರುತ್ತಿದ್ದ ತಂಡವನ್ನು ಸಿಬ್ಬಂದಿ ಗಮನಿಸಿದರು. ಯುವಕರು ತೊರೆಗೆ ಇಳಿಯುವ ಮುನ್ನ ಬಿಚ್ಚಿಟ್ಟಿದ್ದ ಬಟ್ಟೆಗಳನ್ನು ಚಿಕ್ಕಮಗಳೂರು ವಿಭಾಗದ ಪೊಲೀಸ್ ಪ್ಯಾಟ್ರೋಲ್‌ ಸಿಬ್ಬಂದಿ ಹೊತ್ತೊಯ್ದು ತಮ್ಮ ವಾಹನದಲ್ಲಿ ಇರಿಸಿ ತಂಡವನ್ನು ಪೇಚಿಗೆ ಸಿಲುಕಿಸಿದರು.

ಈ ವೇಳೆ ಯುವಕರು ಪೊಲೀಸರ ಜತೆ ವಾಗ್ವಾದ ನಡೆಸಿದ್ದು ಇದಕ್ಕೆ ಬಗ್ಗದ ಪೊಲೀಸರು ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂರು. ಬಳಿಕ ಯುವಕರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಬಟ್ಟೆಗಳನ್ನು ಕೊಡುವಂತೆ ಅಂಗಲಾಚಿದರು. ಪೊಲೀಸರು ಸಾಕಷ್ಟು ಬುದ್ಧಿವಾದ ಮತ್ತು ಅಪಾಯದ ಕುರಿತು ವಿವರಿಸಿ ಎಚ್ಚರಿಕೆ ನೀಡಿ ನಂತರ ಬಟ್ಟೆಗಳನ್ನು ಹಿಂದಿರುಗಿಸಿದರು. ಮೋಜು-ಮಸ್ತಿ ನಿರಂತರ: ಚಾರ್ಮಾಡಿಯಲ್ಲಿ ಧುಮ್ಮಿಕ್ಕುವ ಜಲಪಾತ, ಹಳ್ಳ, ತೊರೆಗಳಿಗೆ ಇಳಿಯುವುದು ಕಲ್ಲು ಬಂಡೆ ಹತ್ತುವುದು ಪ್ರವಾಸಿಗರಿಂದ ನಿರಂತರ ನಡೆಯುತ್ತಿದ್ದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ‌. ಗಸ್ತು ನಿರತ ಪೊಲೀಸರು ಘಾಟಿಯ ಅಪಾಯಕಾರಿ ಸ್ಥಳಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ತೆರಳುವಾಗ ಪ್ರವಾಸಿಗರು ಮತ್ತೆ ಮೋಜು- ಮಸ್ತಿಯಲ್ಲಿ ತೊಡಗುತ್ತಾರೆ. ಪ್ರವಾಸಿಗರು ಮನರಂಜನೆ ನೆಪದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದು ಪೊಲೀಸರ ಎಚ್ಚರಿಕೆಯನ್ನು ಪರಿಗಣಿಸುತ್ತಿಲ್ಲ.

ಘಾಟಿಯ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುವುದರ ಜತೆ ಮದ್ಯಪಾನ, ಧೂಮಪಾನ ಮಾಡುತ್ತಾ ರಸ್ತೆ ಮಧ್ಯೆ ನೃತ್ಯ ಮೊದಲಾದ ಚೇಷ್ಟೆಗಳನ್ನು ಹಲವರು ಮಾಡುತ್ತಿದ್ದು ಇದು ಇತರ ಪ್ರವಾಸಿಗರಿಗೂ ತೊಂದರೆ ಆಗುತ್ತಿತ್ತು. ಇದೀಗ ಪೊಲೀಸರು ಗಸ್ತು ಆರಂಭಿಸಿದ್ದು ಹುಚ್ಚಾಟ ನಡೆಸುವ ಮಂದಿಗೆ ಅನೇಕ ಮಾರ್ಗಗಳ ಮೂಲಕ ಬುದ್ಧಿ ಕಲಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ತಾಲೂಕಿನ ಜಲಪಾತಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಚಾರ್ಮಾಡಿ ಸೌಂದರ್ಯ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಘಾಟಿಯಲ್ಲಿ ಆಗಾಗ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟಿ ಸಹಿತ ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು ಘಾಟಿಯ ಜಲಪಾತ, ತೊರೆಗಳು ತುಂಬಿ ಹರಿಯುತ್ತಿದ್ದು ಅಪಾಯಕಾರಿಯಾಗಿವೆಯಾದರೂ ಆಕರ್ಷಕವಾಗಿವೆ. ಇಲ್ಲಿನ ಕಲ್ಲು, ಬಂಡೆ ತಡೆಗೋಡೆ ವಿಪರೀತ ಜಾರುತ್ತಿದೆ. ಮಂಜು ಕವಿದ ವಾತಾವರಣ ಮುಂಭಾಗದಿಂದ ಬರುವ ವಾಹನ ಕಾಣದಷ್ಟು ದಟ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಮೇಲೆ ಹುಚ್ಚಾಟ ನಡೆಸುವ ಪ್ರವಾಸಿಗರು ವಾಹನ ಸವಾರರಿಗೆ ಸವಾಲಾಗುತ್ತಿದ್ದಾರೆ. ಘಾಟಿಯ ಕೆಲವೆಡೆ ತಡೆಗೋಡೆ, ರಸ್ತೆ ಅಪಾಯದ ಸ್ಥಿತಿಯಲ್ಲಿದ್ದು ವಾಹನ ಸವಾರರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.