ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬಾಲಕಿಯೊಬ್ಬಳು ಪ್ರೀತಿಯ ಹೆಸರಿನಲ್ಲಿ ವಂಚನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೂಲತಃ ಕೊರ್ಲಹಳ್ಳಿ ಗ್ರಾಮದ, ಸದ್ಯ ಮುಂಡರಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಚಹಾ ಅಂಗಡಿ ನಡೆಸುತ್ತಿದ್ದ ರಮೇಶ ಗಚ್ಚಿನಮನಿ ಎಂಬ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.ಮೃತ ಬಾಲಕಿ ಹಾಗೂ ಆರೋಪಿ ರಮೇಶ ಗಚ್ಚಿನಮನಿ ಕಳೆದ ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಮತ್ತೋರ್ವ ಬಾಲಕಿಯೊಂದಿಗೆ ರಮೇಶ ಅತ್ಯಂತ ಆತ್ಮೀಯವಾಗಿರುವ ಕೆಲವು ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಈಕೆಯ ಗಮನಕ್ಕೆ ಬಂದಿದ್ದವು. ಇದರಿಂದಾಗಿ ಬಾಲಕಿ ತೀವ್ರ ಮಾನಸಿಕ ನೊಂದಿದ್ದಳು ಎಂದು ಹೇಳಲಾಗುತ್ತಿದೆ.
ಸೋಮವಾರ ಸಂಜೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್‌ನೋಟ್ ಬರೆದಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ನರೇಗಲ್ಲ: ನರೇಗಲ್- ಗಜೇಂದ್ರಗಡ ರಸ್ತೆ ಪಕ್ಕದಲ್ಲಿರುವ ಶ್ರೀಶೈಲಪ್ಪ ಬಂಡಿಹಾಳ ಎಂಬವರ ಜಮೀನಿನಲ್ಲಿ ಸೋಮವಾರ ಅಪರಿಚಿತ ಪುರುಷ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಅಂದಾಜು 35- 45 ವರ್ಷದ ಪುರುಷನ ಮೃತದೇಹವನ್ನು ಸ್ಥಳೀಯರು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮೃತದೇಹ ಗುರುತಿಸಲಾಗದಂಥ ಸ್ಥಿತಿಯಲ್ಲಿ ಕಂಡುಬಂದಿದ್ದು, ದೇಹದ ಮೇಲೆ ಯಾವುದೇ ಹೆಸರು ವಿಳಾಸ ವಾರಸುದಾರರ ಗುರುತಿನ ದಾಖಲೆಗಳು ಲಭ್ಯವಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದು, ಮಾಹಿತಿ ಇರುವವರು ದೂ. 08381- 268233 ಸಂಪರ್ಕಿಸಬಹುದು.