ತಲಕಾಡಿನಲ್ಲಿ ಎರಡನೇ ಬಾರಿಗೆ ಪ್ರವಾಹ !

| Published : Jul 31 2024, 01:03 AM IST

ಸಾರಾಂಶ

ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಇಲ್ಲಿನ ಗ್ರಾಪಂ ಎಚ್ಚರಿಕೆ

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡು ಹೋಬಳಿ ಸುತ್ತ ಪ್ರವಾಹದಿಂದ ಭೋರ್ಗರೆಯುತ್ತಿದ್ದ ಕಾವೇರಿ-ಕಪಿಲಾ ಪ್ರವಾಹ ಕಡಿಮೆಯಾಗಿ, ಜನ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ, ಮತ್ತೆ ಎರಡನೇ ಬಾರಿಗೆ ಪ್ರವಾಹ ಉಂಟಾಗಿದೆ.

ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದಿಂದ ಮಂಗಳವಾರ ಮಧ್ಯಾಹ್ನ 2 ಲಕ್ಷ ಕ್ಯುಸೆಕ್‌ ನೀರು ಹೊರಬಿಟ್ಟಿರುವ ಮಾಹಿತಿ, ನದಿ ಪಾತ್ರದ ನಿವಾಸಿಗಳಿಗೆ ಹಾಗೂ ಜಲಾವೃತಗೊಳ್ಳುವ ಬೆಳೆ ರೈತರಿಗೆ ಕಂಗೆಡುವಂತೆ ಮಾಡಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಇಲ್ಲಿನ ಗ್ರಾಪಂ ಆಟೋ ಧ್ವನಿವರ್ಧಕದಲ್ಲಿ ಟಾಮ್ ಟಾಮ್ ಮೂಲಕ ಎಚ್ಚರಿಸುವ ಕೆಲಸ ಮಾಡಿದೆ.

ಪ್ರವಾಹದಿಂದ ನಿನ್ನೆಯಷ್ಟೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಿದ್ದ ಹೆಮ್ಮಿಗೆ ಸಂಪರ್ಕ ಸೇತುವೆ ಮತ್ತೆ ಬುಧವಾರದಿಂದ ಬಂದ್ ಆಗುವ ಲಕ್ಷಣವಿದೆ. ತಲಕಾಡು ಹೋಬಳಿ ಪ್ರವೇಶಕ್ಕೆ ಹೆಬ್ಬಾಗಿಲಾದ ಇಲ್ಲಿನ ಸೇತುವೆ ಎರಡು ದಿನ ಬಂದ್ ಆಗಿದ್ದಕ್ಕೆ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದರು. ಈಗ ಮತ್ತೆ ಸಂಚಾರ ಸ್ಥಗಿತಗೊಳ್ಳುವುದು ಜನತೆಯನ್ನು ಆತಂಕಕ್ಕೆ ದೂಡಿದೆ.

ಇನ್ನೂ ನಾಲ್ಕು ದಿನ ಪ್ರವಾಹ ತುಂಬಿ ಹರಿಯಲಿದೆ. ಈಗಾಗಲೆ ಕೇರಳ ವಯನಾಡು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಯಾಗುತ್ತಿದ್ದು, ಕಾವೇರಿ ಕಬಿನಿಯಲ್ಲಿ ಇನ್ನಷ್ಟು ದಿನ ಪ್ರವಾಹ ಮುಂದುವರೆಯುವ ಲಕ್ಷಣವಿದೆ. ಹೀಗಾಗಿ ಹೋಬಳಿಯಲ್ಲಿ ಸಂಭವನೀಯ ಪ್ರವಾಹದ ಹಾನಿಯಿಂದ ಪಾರು ಮಾಡಲು ಜಿಲ್ಲೆ ಮತ್ತು ತಾಲ್ಲೂಕು ಆಡಳಿತ ಸಕಲ ಕ್ರಮ ಕೈಗೊಂಡು ಪ್ರವಾಹ ಪರುಸ್ಥಿತಿ ಎದುರಿಸಲು ಸಜ್ಜಾಗಿದೆ.

ಮಂಗಳವಾರ ಹೆಮ್ಮಿಗೆ ಸೇತುವೆ ಬಳಿ ದೌಡಾಯಿಸಿದ್ದ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಜಿಪಂ ಉಪಕಾರ್ಯದರ್ಶಿ ಡಾ. ಕೃಷ್ಣರಾಜು, ತಾಲೂಕು ತಹಸೀಲ್ದಾರ್ ಸುರೇಶಾಚಾರ್, ತಾಪಂ ಇಒ ಸಿ. ಕೃಷ್ಣ, ತಲಕಾಡು ಠಾಣೆಯ ಸಿಪಿಐ ಆನಂದ್ ಕುಮಾರ್ ಪ್ರವಾಹದ ಪರಿಸ್ಥಿತಿ ಅವಲೋಕಿಸಿ ಸಿಬ್ಬಂದಿ ವರ್ಗಕ್ಕೆ ಮಾರ್ಗದರ್ಶನ ನೀಡಿದರು.

2 ಲಕ್ಷ ಕ್ಯುಸೆಕ್‌ ಗೂ ಹೆಚ್ಚು ನೀರು ಇಲ್ಲಿನ ನದಿಯಲ್ಲಿ ಹರಿದಾಗ, ಜಲಾವೃತಗೊಳ್ಳುವ ಪ್ರದೇಶಗಳ ಪಟ್ಟಿಯನ್ನು ಮುಂಚಿತವಾಗಿ ಸಿದ್ದಪಡಿಸಿಕೊಂಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು, ಈಗಾಗಲೆ ಮುಳುಗಡೆಗೊಳ್ಳುವ ಪ್ರದೇಶದ ಜನತೆಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿದಂಡೆಯಲ್ಲಿ ಜಲಾವೃತಗೊಳ್ಳುವ ಪ್ರದೇಶಗಳಿಂದ ನಿವಾಸಿಗಳು ತೆರವುಗೊಳ್ಳಲು ಮುಂಚಿತವಾಗಿ ಸೂಚನೆ ನೀಡಿದ್ದರ ಫಲ, ನದಿ ಪಾತ್ರದಲ್ಲಿದ್ದವರು ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ನದಿದಂಡೆಯ ತಡಿಮಾಲಂಗಿ ಗ್ರಾಮಕ್ಕೆ ಪ್ರವಾಹ ನುಸುಳುವುದರಿಂದ, ನದಿಪಾತ್ರದ ನಿವಾಸಿಗಳನ್ನು ಇಲ್ಲಿನ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ದಿಢೀರನೆ ಇಲ್ಲಿನ‌ಕಾಳಜಿ ಕೇಂದ್ರಕ್ಕೆ ತೆರಳಿದ್ದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಪ್ರವಾಹ ಪೀಡಿತರಿಗೆ ಒದಗಿಸಿರುವ ಸೌಕರ್ಯಗಳ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ಭೇಟಿಯ ವೇಳೆ ಲೋಕೋಪಯೋಗಿ ಎಇಇ ಸತೀಶ್,

ನಾಡಕಚೇರಿ ಉಪತಹಸೀಲ್ದಾರ್ ಇ, ಕುಮಾರ್, ಪ್ರಭಾರ ಆರ್‌ಐ ಸತೀಶ್ ಹಾಗೂ ಸಿಬ್ಬಂದಿ ವರ್ಗ, ತಲಕಾಡು, ಹೆಮ್ಮಿಗೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಾದ ಮಹೇಶ್, ಚಿದಾನಂದ ಇದ್ದರು.