ಆಯೋಗಕ್ಕೆ ವರದಿ ಸಲ್ಲಿಸಿ 3 ತಿಂಗಳಾದರೂ ಕ್ರಮವಿಲ್ಲ

| Published : Jul 31 2024, 01:03 AM IST

ಆಯೋಗಕ್ಕೆ ವರದಿ ಸಲ್ಲಿಸಿ 3 ತಿಂಗಳಾದರೂ ಕ್ರಮವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಆಯೋಗಕ್ಕೆ ವರದಿ ಸಲ್ಲಿಸಿ 3 ತಿಂಗಳಾದರೂ ಕ್ರಮವಿಲ್ಲ

ಕನ್ನಡಪ್ರಭ ವಾರ್ತೆ, ತುಮಕೂರುಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯದಲ್ಲಿನ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ತುಮಕೂರಿನ ಕೆಲ ಅಧಿಕಾರಿಗಳು ನೃತ್ಯ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಣ್ಣು ಮಕ್ಕಳ ಜೊತೆ ಗೌರವಯುತವಾಗಿ ನಡೆದುಕೊಂಡಿಲ್ಲವೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಚಿಸಿದ ಮೂವರು ಸದಸ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ಆಯೋಗಕ್ಕೆ ವರದಿ ಸಲ್ಲಿಸಿ 3 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ2023 ರ ನವೆಂಬರ್ 16 ರಂದು ತುಮಕೂರಿನ ಹಿಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿ ಕೆಲ ಅಧಿಕಾರಿಗಳು ಭಾಗವಹಿಸಿದ್ದ ಈ ಪ್ರಕರಣದಲ್ಲಿ ಮಕ್ಕಳ ಗೌಪ್ಯತೆ, ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಅಂಜಲಿ ರಾಮಣ್ಣ, ಸಿ.ವಿ. ತಿರುಮಲರಾವ್ ಹಾಗೂ ಹೆಚ್.ಸಿ. ರಾಘವೇಂದ್ರ ಅವರನ್ನು ಒಳಗೊಂಡ ಸಮಿತಿಯನ್ನು ಆಯೋಗ ರಚಿಸಿತ್ತು.ಈ ಮೂವರು ಸದಸ್ಯರನ್ನೊಳಗೊಂಡ ಸಮಿತಿಯು ಏಪ್ರಿಲ್ 29 ರಂದು ಅಧಿಕಾರಿಗಳು ಹೆಣ್ಣು ಮಕ್ಕಳ ಜೊತೆ ಗೌರವಯುತವಾಗಿ ನಡೆದುಕೊಂಡಿಲ್ಲವೆಂದು ವರದಿ ಸಲ್ಲಿಸಿ ಮೂರು ತಿಂಗಳಾದರೂ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ.ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣದ ಹಿನ್ನೆಲೆಯಲ್ಲಿ ಜನವರಿ 6 ರಂದು ಆಯೋಗ ತ್ರಿಸದಸ್ಯ ಸಮಿತಿ ರಚಿಸಿತ್ತು. ಮೂರು ಮಂದಿ ಜನವರಿ 18 ರವರೆಗೆ ತಳಸ್ಪರ್ಷಿಯಾಗಿ ತನಿಖೆ ನಡೆಸಿ ಆಯೋಗಕ್ಕೆ ವರದಿ ನೀಡಿದೆ.ಅಪ್ರಾಪ್ತ ಬಾಲಕಿಯಯರು ಇರುವ ಕಡೆ ರಾತ್ರಿ ವೇಳೆ ಯಾವುದೇ ನಿಯಮ ಮತ್ತು ಕ್ರಮ ಬದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತ್ರಿಸದಸ್ಯ ಸಮಿತಿ ಆಯೋಗಕ್ಕೆ ತಿಳಿಸಿದೆ. ಹಿಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಪ್ರಕರಣ ನಡೆದ ದಿವಸದ ಎಲ್ಲಾ ಸಿಸಿ ಟಿವಿ ದೃಶ್ಯಗಳನ್ನು ನಾಶಪಡಿಸಲಾಗಿದೆ. ಅಲ್ಲದೇ 18 ವರ್ಷದೊಳಗಿನ ಬಾಲಕಿಯರು ಇರುವ ಹಾಸ್ಟೆಲ್ ಗಳಲ್ಲಿ ಸಂಜೆ 6 ರೊಳಗೆ ಕಾರ್ಯಕ್ರಮ ಮುಗಿಸಬೇಕಾಗಿತ್ತು. ಆದರೆ 6 ರ ನಂತರವೂ ಕಾರ್ಯಕ್ರಮ ನಡೆದಿರುವುದು ಮಕ್ಕಳ ರಕ್ಷಣಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತ್ರಿಸದಸ್ಯ ಸಮಿತಿಯು ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.ಅಂದು ಯಾವ ಕಾರ್ಯಕ್ರಮ ನಡೆಯಿತು ಎಂಬ ಬಗ್ಗೆ ಸ್ಪಷ್ಟವಾಗಿ ತ್ರಿಸದಸ್ಯ ಸಮಿತಿಗೆ ನೀಡುವಲ್ಲಿ ವಿಫಲರಾಗಿದ್ದಾರೆ. ಕೆಲವರು ದೀಪಾವಳಿ ಕಾರ್ಯಕ್ರಮದ ನಿಮಿತ್ತ ಎಂದರೆ ಮತ್ತೆ ಕೆಲವರು ರಾಜ್ಯೋತ್ಸವ ಸಮಾರಂಭವೆಂದು, ಇನ್ನು ಕೆಲವರು ಅಂದಿನ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ ಅಂತಹ ಕಾರ್ಯಕ್ರಮದ ಯಾವುದೇ ಫೋಟೋ ಮತ್ತು ವಿಡಿಯೋ ಸೇರಿದಂತೆ ಯಾವ ದಾಖಲೆಯೂ ಇಲ್ಲದಂತೆ ಮರೆ ಮಾಚಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಾಕ್ಸ್‌.. ಏನಿದು ಪ್ರಕರಣ....ತುಮಕೂರು ಸಮೀಪದ ಪರಿಶಿಷ್ಟ ಜಾತಿ ಮತ್ತು ಪಂಗಡದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಇರುವ ಹಾಸ್ಟೆಲ್ ನಲ್ಲಿ ನವಂಬರ್ 16 ರಂದು ವಿದ್ಯಾರ್ಥಿನಿಯರೊಂದಿಗೆ ಅಧಿಕಾರಿಗಳು ನೃತ್ಯ ಮಾಡಿದ್ದರು ಎಂಬ ಆರೋಪವು ಕೇಳಿ ಬಂದಿದ್ದು ರಾಜ್ಯ ಮಟ್ಟದಲ್ಲಿ ಗಮನಸೆಳೆದಿತ್ತು. ಈ ಸಂಬಂಧ ಹೋರಾಟಗಾರ ಎಚ್.ಎಂ. ವೆಂಕಟೇಶ್ ಸೇರಿದಂತೆ ಘಟನೆ ಸಂಬಂಧ ತನಿಖೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತ್ರಿಸದಸ್ಯ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಸಮಿತಿ ಸದಸ್ಯರು ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.