ಸಿಬಿಐ, ಇಡಿ ಅವರನ್ನು ಕಳಿಸಿ ರೇಡ್ ಮಾಡಿಸ್ತಾರಲ್ಲ. ಒಂದು ಸಾರಿ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಮನೆಯನ್ನು ಚೆಕ್ ಮಾಡಿಸಿ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಿಬಿಐ, ಇಡಿ ಅವರನ್ನು ಕಳಿಸಿ ರೇಡ್ ಮಾಡಿಸ್ತಾರಲ್ಲ. ಒಂದು ಸಾರಿ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಮನೆಯನ್ನು ಚೆಕ್ ಮಾಡಿಸಿ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದ್ದಾರೆ.ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಹಾಗೂ ಡಿಸಿಎಂ ಅವರು ದುಬಾರಿ ವಾಚ್ ಕಟ್ಟಿದ್ದಾರೆ ಎಂಬ ಬಿಜೆಪಿಯವರ ಟೀಕೆಗೆ ತಿರುಗೇಟು ನೀಡಿದ ಅವರು, ನೋಡ್ರಿ ಯಾವ ₹40 ಲಕ್ಷ , ₹5.10 ಕೋಟಿ, ಅದಕ್ಕೂ ದುಬಾರಿ ವಾಚ್ ಹಾಕಿಕೊಂಡು ಇವರು (ಬಿಜೆಪಿ) ಅವರು ಇದ್ದಾರೆ. ಈ ರಾಜ್ಯದಲ್ಲಿ ಒಂದು ಬಾರಿಯಾದರೂ ಬಿಜೆಪಿಯವರ ಮನೆ ಚೆಕ್ ಮಾಡಿ ಎಂದು ತನಿಖಾ ಸಂಸ್ಥೆಗಳಿಗೆ ಸವಾಲು ಹಾಕಿದ್ದಾರೆ.
ಈಶ್ವರಪ್ಪನವರ ಮನೆಯಲ್ಲಿ ಕೌಂಟಿಂಗ್ ಮಷಿನ್ ಕೂಡ ಸಿಕ್ಕಿತ್ತು. ಬಿಜೆಪಿ ಅವರ ಬಳಿ ಇನ್ನೂ ದುಬಾರಿ ವಾಚ್‌ಗಳಿವೆ, ₹1 ಕೋಟಿ, 2 ಕೋಟಿ ವಾಚ್‌ಗಳಿವೆ. ಇದೇನ್ ₹40 ಲಕ್ಷ ವಾಚ್, ಡಿ.ಕೆ.ಶಿವಕುಮಾರ್ ನಾನು ದಾಖಲೆಗಳನ್ನು ಕೊಟ್ಟಿದ್ದೇನೆ ಅಂದಿದ್ದಾರೆ. ಚುನಾವಣೆ ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದೀನಿ ಅಂತ ಹೇಳಿದ್ದಾರೆ. ಡಿಕ್ಲೇರ್ ಮಾಡಿದರೂ ಈ ರೀತಿ ಹೇಳ್ತಾ ಇರೋದು ಚಿಲ್ಲರೆ ಕೆಲಸ ಅಲ್ಲವಾ? ಇದನ್ನೆಲ್ಲ ಯಾಕೆ ಲೆಕ್ಕ ಹಾಕ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.ಇವರು ವಿರೋಧ ಪಕ್ಷದಲ್ಲಿ ಕೂತಿದ್ದಾರೆ. ರೈತರ ಸಮಸ್ಯೆ, ಬಡವರ ಸಮಸ್ಯೆಗಳನ್ನು ಬೆಳಕಿಗೆ ತರೋದನ್ನು ಬಿಟ್ಟು. ಸಿದ್ದರಾಮಯ್ಯ ನಲವತ್ತು ಲಕ್ಷ ರೂಪಾಯಿ ವಾಚ್, ಡಿ.ಕೆ.ಶಿವಕುಮಾರ್ ₹50 ಲಕ್ಷ ವಾಚ್ ಕಟ್ಟಿದ್ದಾರೆಂದು ಹೇಳುತ್ತಿದ್ದಾರೆ. ಇದರಿಂದ ಏನಾಗುತ್ತದೆ ಎಂದು ಪ್ರಶ್ನಿಸಿದ ಅವರು, ಇದರಿಂದ ಏನಾದರೂ ಬರುತ್ತಾ? ನಾಡಿನ ಜನಕ್ಕೆ ಇವರು ಏನು ಹೇಳುತ್ತಾರೆ. ಸಮಸ್ಯೆಗಳ ಕುರಿತು ವಿರೋಧ ಮಾಡುವುದನ್ನು ಕಲಿಯಲಿ. ಅದನ್ನು ಬಿಟ್ಟು ನಮ್ಮ ಮನೆಯಲ್ಲಿ ಏನಿದೆ ಎಂಬುದನ್ನು ಹುಡುಕುವುದನ್ನು ಕಲಿತಿದ್ದಾರೆ. ಅದಕ್ಕೆ ಇವರ ಮನೆಯನ್ನು ಮೊದಲು ಹುಡುಕಿ ಎಂದು ಹೇಳುತ್ತಿದ್ದೇನೆ ಎಂದರು.
ಯಾರ್‍ಯಾರು ದೊಡ್ಡ ನಾಯಕರು. ಮಾಜಿ ಮುಖ್ಯಮಂತ್ರಿಗಳು, ಮುಖ್ಯಮಂತ್ರಿ ಮಕ್ಕಳು. ಇವರ ಮನೆ ಒಂದು ಬಾರಿ ರೇಡ್ ಮಾಡಿ ಏನ್ ಸಿಗುತ್ತೆ ಗೊತ್ತಾಗುತ್ತದೆ ಎಂದ ಅವರು, ವೇರ್ ಅಂಡ್ ಟೇರ್ ಈಜ್ ಡಿಫ್ರೆಂಟ್. ಡೋಂಟ್ ಕಂಪೇರ್ ಇಟ್ ಟು ವೇರ್ ಅಂಡ್ ಟೇರ್. ಮೈ ಮೇಲೆ ಬಟ್ಟೆ ಹಾಕುವುದಕ್ಕೆ ಏನು ತಪ್ಪು? ನಮಗೆ ಯಾವುದು ಇಷ್ಟ ಆ ಬಟ್ಟೆ ಹಾಕುತ್ತೇವೆ. ಯಾವುದು, ಇಷ್ಟ ಆ ಶೂ ಹಾಕಿಕೊಳ್ಳುತ್ತೇವೆ. ಯಾವುದು ಇಷ್ಟ ಆ ವಾಚ್ ಕಟ್ಕೊಳ್ತೀವಿ. ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರಿಗೆ ಇರೋದೇ ಎರಡು ಹವ್ಯಾಸ, ಒಂದು ವಾಚ್ ಕಟ್ಟೋದು, ಒಂದು ಚಸ್ಮಾ ಹಾಕಿಕೊಳ್ಳೋದು. ಅದನ್ನು ಬಿಟ್ರೆ ಸಿದ್ರಾಮಯ್ಯನವರಿಗೆ ಏನೇನೂ ಆಸೆ ಇಲ್ಲ. ಅವರ ಮೇಲೆ ಒಂದಾದರೂ ಭ್ರಷ್ಟಾಚಾರ ಮಾಡಿದ್ದರೆ ತೋರಿಸಿ. ಬಿಜೆಪಿ ಅವರು ಇಷ್ಟು ಹಾರಾಡ್ತಾರಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ. ಇವತ್ತು ಯಾಕೆ ಜೈಲಿಗೆ ಹೋಗಿ ಬಂದರು ಭ್ರಷ್ಟಾಚಾರ ಮಾಡಿದ್ದಕ್ಕೆ.ಆ ರೀತಿ ಒಂದು ಆರೋಪವನ್ನು ನಮ್ಮ ಮುಖ್ಯಮಂತ್ರಿಗಳ ಮೇಲೆ ತೋರಿಸಿ ತಾಕತ್ತಿದ್ರೆ ಎಂದು ಕಿಡಿಕಾರಿದರು.ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ವಾಚ್ ಹಾಕಿದ ತಕ್ಷಣ ಆರೋಪ ಮಾಡೋದು? ಯಾರೋ ಒಬ್ಬರು ಗಿಫ್ಟ್ ಮಾಡಿರ್ತಾರೆ. ಗಿಫ್ಟ್ ಮಾಡಿದ್ರೆ ಏನು ಮಾಡಬೇಕು? ನಾವು ರಾಜಕಾರಣಿಗಳು ಗಿಫ್ಟ್ ತಗೋಬಾರ್ದಾ? ನನಗೂ ಈ ಜಾಕೆಟ್ ಕೊಟ್ಟಿದಾರೆ, ಹಾಕಿಕೊಳ್ಳಿ ಚಂದ ಕಾಣ್ತೀರಿ ಅಂದ್ರು. ಅದಕ್ಕೆ ಹಾಕಿಕೊಂಡು ಓಡಾಡ್ತಿನಿ, ಯಾರೋ ಕೊಟ್ಟಿದ್ದನ್ನು ಹಾಕೊಳ್ತೀವಿ. ನಮಗೆ ತೆಗೆದುಕೊಳ್ಳುವ ತಾಕತ್ತು ಇರಲಿಕ್ಕಿಲ್ಲ. ಆದರೆ ಕೊಟ್ಟಿರುವವರಿಗೆ ಬೇಡ ಎಂದು ಅವರಿಗೆ ಅಪಮಾನ ಮಾಡಬಾರದಲ್ವಾ ಕಾಣಿಕೆ ನೀಡಿದವರಿಗೆ ಎಂದು ಕಾಶಪ್ಪನವರ ತಿಳಿಸಿದರು.