ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹಾಯಧನದಡಿ ಅಳವಡಿಸುವ ಹನಿನೀರಾವರಿ ಪೈಪ್ ಹಾಗೂ ಇತರೆ ಸಲಕರಣೆಗಳ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ಜಮೀನುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರೀಕ್ಷಿಸಬೇಕೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ನ ಸರ್ .ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ 15 ಇಲಾಖೆಗಳ ಪ್ರಗತಿ ಪರಿಶೀಲಿಸಿ, ಮಾತನಾಡಿದರು.
ನಿಷೇಧಿತ ಕೀಟನಾಶಕ ಮಾರಾಟಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ, ಲೇಬಲ್ ಇಲ್ಲದೆ ಹಾಗೂ ಬ್ಯಾನ್ ಮಾಡಿರುವ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದರು. ಈ ಕುರಿತು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಜಾಮೀದಾ ನಸೀಮಾ ಖಾನಂ ಪ್ರತಿಕ್ರಿಯಿಸಿ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವ 10 ಅನಧಿಕೃತ ಮಳಿಗೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.ಕೊಳವೆ ಬಾವಿ ನೀರು ಪರೀಕ್ಷಿಸಿ
ಜಿಲ್ಲೆಯಲ್ಲಿ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ನೀರು ಯೋಜನೆ ಬಂದ ಮೇಲೆ ಜಾನುವಾರುಗಳ ಹಾಲಿನ ಇಳುವರಿ ಕಡಿಮೆ ಆಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ನೀಡಬೇಕು. ಈ ವ್ಯಾಲಿಗಳಿಂದ ನೀರು ತುಂಬಿಸುವ ಕೆರೆಗಳ ಸುತ್ತಮುತ್ತಲಿನ ಹತ್ತಿರದ ಕೊಳವೆ ಬಾವಿಗಳ ನೀರನ್ನು ಪರೀಕ್ಷಿಸಿ ವರದಿ ನೀಡಿವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಅಪರ ಡೀಸಿ ಡಾ.ಎನ್. ಭಾಸ್ಕರ್, ಅರಣ್ಯ ಉಪ ಸಂರಕ್ಷಣಾಧಿಕಾರಿ ಹೆಚ್.ಸಿ.ಗಿರೀಶ್ ಮತ್ತಿರ ಅಧಿಕಾರಿಗಳು ಇದ್ದರು.