ತೆಲಂಗಾಣ ರಾಜ್ಯಪಾಲರಿಂದ ಚೆಲುವನಾರಾಯಣಸ್ವಾಮಿ ದರ್ಶನ

| Published : May 28 2024, 01:10 AM IST

ತೆಲಂಗಾಣ ರಾಜ್ಯಪಾಲರಿಂದ ಚೆಲುವನಾರಾಯಣಸ್ವಾಮಿ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಾನುಜ ಸಂಪ್ರದಾಯದ ಅನುಯಾಯಿಗಳೂ ಆದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಕಚ್ಚೆಪಂಚೆ ತಿರುನಾಮಧರಿಸಿ ಭಕ್ತಿಯಿಂದ ಶ್ರೀಚೆಲುವನಾರಾಯಣಸ್ವಾಮಿ ಯದುಗಿರಿ ನಾಯಕಿ ಹಾಗೂ ರಾಮಾನುಜಾಚಾರ್ಯರ ದರ್ಶನ ಪಡೆದರು. ದಕ್ಷಿಣ ಬದರೀಕಾಶ್ರಮ ಮೇಲುಕೋಟೆಯ ಬದರೀವೃಕ್ಷವನ್ನು ದರ್ಶನ ಮಾಡಿ ದೇವಾಲಯದ ಬಳಿ ನಾಗರಾಜಯ್ಯಂಗಾರ್‌ ಸ್ವಾಮಿಗಳ ಗೋಶಾಲೆ ಗೋವಿಗೆ ಗೋಗ್ರಾಸ ನೀಡಿ ಲೋಕಕಲ್ಯಾಣಾರ್ಥಕ್ಕಾಗಿ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ತೆಲಂಗಾಣ, ಪಾಂಡಿಚೇರಿ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಸೋಮವಾರ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಬೆಳಗ್ಗೆ 11ಗಂಟೆಗೆ ಬೆಂಗಳೂರಿನಿಂದ ದೇವಾಲಯಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಅನೂಚಾನ ಸಂಪ್ರದಾಯದಂತೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ರಾಮಾನುಜ ಸಂಪ್ರದಾಯದ ಅನುಯಾಯಿಗಳೂ ಆದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಕಚ್ಚೆಪಂಚೆ ತಿರುನಾಮಧರಿಸಿ ಭಕ್ತಿಯಿಂದ ಶ್ರೀಚೆಲುವನಾರಾಯಣಸ್ವಾಮಿ ಯದುಗಿರಿ ನಾಯಕಿ ಹಾಗೂ ರಾಮಾನುಜಾಚಾರ್ಯರ ದರ್ಶನ ಪಡೆದರು.

ದಕ್ಷಿಣ ಬದರೀಕಾಶ್ರಮ ಮೇಲುಕೋಟೆಯ ಬದರೀವೃಕ್ಷವನ್ನು ದರ್ಶನ ಮಾಡಿ ದೇವಾಲಯದ ಬಳಿ ನಾಗರಾಜಯ್ಯಂಗಾರ್‌ ಸ್ವಾಮಿಗಳ ಗೋಶಾಲೆ ಗೋವಿಗೆ ಗೋಗ್ರಾಸ ನೀಡಿ ಲೋಕಕಲ್ಯಾಣಾರ್ಥಕ್ಕಾಗಿ ಪ್ರಾರ್ಥಿಸಿದರು.

ಚಿನ್ನಜೀಯರ್ ಮಠದಲ್ಲಿ ಭೋಜನ ಸ್ವೀಕರಿಸಿ ಕಲ್ಯಾಣಿಯ ಬಳಿ ತೋಟದಲ್ಲಿ ತುಳಸಿಗಿಡ ನೆಟ್ಟ ನಂತರ ಮಧ್ಯಾಹ್ನ 2.30ಕ್ಕೆ ಮೇಲುಕೋಟೆಯಿಂದ ನಿರ್ಗಮಿಸಿದರು. ಇದಕ್ಕು ಮೊದಲು ರಾಜ್ಯಪಾಲರನ್ನು ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿ ಶಿಷ್ಠಾಚಾರದಂತೆ ಸ್ವಾಗತಿಸಿತು.

ಈ ವೇಳೆ ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಶ್ರೇಯಸ್, ದೇವಾಲಯದ ಇಒ ಮಹೇಶ್, ಪಾರುಪತ್ತೇಗಾರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಎಂ.ಎನ್ ಪಾರ್ಥಸಾರಥಿ ಸ್ವಾಗತಿಸಿ ದೇವಾಲಯದ ಮಾಹಿತಿಯನ್ನು ನೀಡಿದರು.

ಭೇಟಿ ಕೊನೆಯಲ್ಲಿ ದೇವಾಲಯದ ಸಂಪ್ರದಾಯದಂತೆ ರಾಜ್ಯಪಾಲ ರಾಧಾಕೃಷ್ಣನ್‌ರಿಗೆ ರಾಜಾಶೀರ್ವಾದ ಮಾಡಿ ಕಳುಹಿಸಿಕೊಡಲಾಯಿತು. ಸಿಂಎಂ ಸಿಧ್ದರಾಮಯ್ಯ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ಹಾಗೂ ಪಾಂಡವಪುರ ಪೊಲೀಸರು ಭದ್ರತೆ ನೀಡಿದ್ದರು. ಚೆಲುವನಾರಾಯಣಸ್ವಾಮಿಗೆ ಅರ್ಪಿಸಿದ ತುಳಸಿ-ಹೂವಿನ ತೋಟಗಳು ಹೆಚ್ಚಾಗಲಿ: ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್

ಮೇಲುಕೋಟೆ:ಅದಿದೈವ ಚೆಲುವನಾರಾಯಣಸ್ವಾಮಿಗೆ ಅರ್ಪಿಸಲು ತುಳಸಿ-ಹೂವಿನ ತೋಟಗಳು ಹೆಚ್ಚಾಗಲಿ ಎಂದು ತೆಲಂಗಾಣ, ಪಾಂಡಿಚೇರಿ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲ (ಪೊನ್) ಸಿ.ಪಿ.ರಾಧಾಕೃಷ್ಣನ್ ಆಶಿಸಿದರು.

ಕಲ್ಯಾಣಿಯ ಸಾಲು ಮಂಟಪದ ಹಿಂಭಾಗ ತುಳಸಿ ಗಿಡನೆಟ್ಟು ಮಾತನಾಡಿ, ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯಲ್ಲಿ ಅದಿದೈವ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ನೆಲೆಸಿದ್ದಾರೆ. ಸ್ವಾಮಿಗೆ ಸಮರ್ಪಿಸಲು ಕಲ್ಯಾಣಿಯ ಬಳಿ ತುಳಸಿ ಮತ್ತು ಹೂವಿನ ತೋಟ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ತುಳಸಿತೋಟ ಮಾಡಲು ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ಶಿಬಿರಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಶ್ರಮಿಸಿದ್ದೀರಿ. ದೇವಾಲಯಗಳಿಗೆ ತುಳಸಿ ಮತ್ತು ಹೂವುನ್ನು ನೀಡಲು ಎಲ್ಲಾ ಕಡೆ ಪ್ರತ್ಯೇಕ ತೋಟಗಳಿವೆ. ಮೇಲುಕೋಟೆಯಲ್ಲೂ ಹಲವು ತೋಟಗಳಿವೆ ಎಂಬ ಮಾಹಿತಿ ಇದೀಗ ತಿಳಿಯಿತು. ಇವುಗಳನ್ನೂ ಗುರುತಿಸಿ ಅವುಗಳಿಗೆ ಜೀವ ತುಂಬುವಕಾರ್ಯ ಆಗಬೇಕು.ಇದರಿಂದ ಪರಿಸರ ಸಂರಕ್ಷಣೆ ಕೆಲಸವೂ ಆಗುತ್ತದೆ ಎಂದರು.

ಮೇಲುಕೋಟೆಯ ಕಲ್ಯಾಣಿಯ ಬಳಿ ತುಳಸಿತೋಟ ಉತ್ತಮವಾಗಿ ನಿರ್ವಹಣೆಯಾಗಿ ಚೆಲುವನಾರಾಯಣನಿಗೆ ತುಳಸಿ ಸಮರ್ಪಿಸುವ ಪ್ರಮುಖ ತೋಟವಾಗಲಿ ಹೇಳಿದರು. ರಾಜ್ಯಪಾಲರನ್ನು ಡಾ.ಪ್ರೀತಿ ಮಹದೇವ್, ಸ್ಥಾನೀಕಂ ಸಂತಾನರಾಮನ್ ತುಳಸಿ ಗಿಡನೆಟ್ಟು ತೋಟಕ್ಕೆ ಚಾಲನೆ ನೀಡಲು ಆಹ್ವಾನಿಸಿದ್ದರು.ಈ ವೇಳೆ ಪಾಂಡವಪುರ ತಹಸೀಲ್ದಾರ್ ಶ್ರೇಯಸ್, ದೇಗುಲದ ಇಒ ಮಹೇಶ್, ವಿದ್ವಾನ್ ಶ್ರೀರಂಗಂ ರಾಮಪ್ರಿಯ ಎಸ್.ಎನ್ ಸಂತಾನರಾಮನ್, ಎಸ್. ನಾರಾಯಣಭಟ್ಟರ್, ಎನ್.ಎಸ್.ಎಸ್ ಶಿಭಿರಾಧಿಕಾರಿ ಡಾ.ಎನ್.ಕೆ ವೆಂಕಟೇಗೌಡ, ರಾಜೇಶ್, ಸುರೇಶ್, ಜಯಕುಮಾರ್ ಮಹದೇವಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.